ಗುರುಪುರ ಬಾವಿಗೆ ಬಿದ್ದ ಕರಿಚಿರತೆ ರಕ್ಷಣೆ

gur-mar-31-karichiarathe-1
Published on


ಗುರುಪುರ: ಎಡಪದವಿಗೆ ಸಮೀಪದ ಗೋಸ್ಪೆಲ್ ಸನಿಲ ಎಂಬಲ್ಲಿ ಬಾವಿಗೆ ಬಿದ್ದಿದ್ದ ಬಲು ಅಪೂರ್ವ ಕರಿಚಿರತೆಯನ್ನು ಭಾನುವಾರ ಅರಣ್ಯ ಇಲಾಖೆ ಸಿಬ್ಬಂದಿ ಹಾಗೂ ಸ್ಥಳೀಯರ ಸಹಕಾರದಿಂದ ಮೇಲೆತ್ತಿ ರಕ್ಷಿಸಲಾಗಿದೆ.
ಸನಿಲ ನಿವಾಸಿ ಶಕುಂತಲಾ ಆಚಾರ್ಯ ಎಂಬುವರ ಮನೆಯ ಬಾವಿಯಲ್ಲಿ ಕರಿಚಿರತೆ ಬಿದ್ದಿತ್ತು. ಈ ಬಗ್ಗೆ ಮನೆಯವರು ಅರಣ್ಯ ಇಲಾಖೆಗೆ ಮಾಹಿತಿ ನೀಡಿದರು. ವಲಯ ಅರಣ್ಯ ಇಲಾಖಾಧಿಕಾರಿ ರಾಜೇಶ್ ಬಳಿಗಾರ್ ನೇತೃತ್ವದ ತಂಡ ಸ್ಥಳಕ್ಕೆ ಆಗಮಿಸಿ ಕಾರ್ಯಾಚರಣೆಗಿಳಿದಿದೆ. ತಂಡದಲ್ಲಿ ಜಗರಾಜ್, ದಿನೇಶ್, ಕ್ಯಾತಲಿಂಗ, ಸೂರಜ್ ಇದ್ದರು. ಸ್ಥಳೀಯರಾದ ಗಣೇಶ್ ನಾಯಕ್ ಎಡಪದವು, ಹರೀಶ್ ಎಡಪದವು ಮತ್ತು ಮೋರಿಸ್ ಪಿಂಟೊ ಮೊದಲಾದವರು ಅರಣ್ಯ ಇಲಾಖಾ ಸಿಬ್ಬಂದಿ ಜತೆ ರಕ್ಷಣಾ ಕಾರ್ಯದಲ್ಲಿ ಸಹಕರಿಸಿದರು. ಚಿರತೆ ರಕ್ಷಣಾ ಕಾರ್ಯದ ವೇಳೆ ಸ್ಥಳದಲ್ಲಿ ಭಾರಿ ಪ್ರಮಾಣದ ಜನ ಸೇರಿದ್ದರು. ಬಜ್ಪೆ ಪೊಲೀಸರು ಜನರನ್ನು ನಿಯಂತ್ರಿಸಲು ಸಹಕರಿಸಿದರು.
ಮೂರೂವರೆ ಗಂಟೆ ರಕ್ಷಣಾ ಕಾರ್ಯ ನಡೆದಿದ್ದು, ಬೆಳಗ್ಗೆ 11.30ಕ್ಕೆ ಚಿರತೆಯನ್ನು ಬಾವಿಯಿಂದ ಮೇಲೆತ್ತಲಾಗಿದೆ. ಶನಿವಾರ ರಾತ್ರಿ ಎಡಪದವಿನ ಬೋರುಗುಡ್ಡೆ ನಿವಾಸಿ ಮಥಾಯಿಸ್ ಎಂಬುವರ ಹಸುವಿನ ಮೇಲೆರೆಗಿದ್ದ ಚಿರತೆ ಹಸುವಿನ ಅರ್ಧ ದೇಹ ಛಿದ್ರಗೊಳಿಸಿತ್ತು. ಅಲ್ಲದೆ ಕೆಲವು ಸಮಯದಿಂದ ಈ ಪ್ರದೇಶದಲ್ಲಿ ಹಲವು ಸಾಕುನಾಯಿಗಳು ಚಿರತೆ ಬಾಯಿಗೆ ಆಹಾರವಾಗಿತ್ತು ಎಂದು ಸ್ಥಳೀಯರು ಹೇಳಿದ್ದಾರೆ.


ಕರಿಚಿರತೆ ಅಪೂರ್ವವಾಗಿದೆ, ಇದೊಂದು ವಿಶೇಷ ಪ್ರಭೇದವಾಗಿದೆ. ಪಶು ವೈದ್ಯರಿಂದ ಆರೋಗ್ಯ ತಪಾಸಣೆ ಬಳಿಕ ಮುಂದಿನ ಕ್ರಮ ಕೈಗೊಳ್ಳಲಾಗುವುದು.
ರಾಜೇಶ್ ಬಳಿಗಾರ್
ಮಂಗಳೂರು ವಲಯ ಅರಣ್ಯಾಧಿಕಾರಿ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net