ಗುರುಪುರ ವಿದ್ಯುತ್‌ ಕಂಬಕ್ಕೆ ರಿಕ್ಷಾ ಡಿಕ್ಕಿ ಯುವತಿ ಸ್ಥಳದಲ್ಲೇ ಸಾವು, ಇಬ್ಬರು ಗಂಭೀರ

gur-sep-17-rikshaw palty-1
Published on

ಮಂಗಳೂರು: ಗುರುಪುರ ಗ್ರಾಪಂ ಹಿಂಭಾಗದಿಂದ ಹೆದ್ದಾರಿ ಸಂಪರ್ಕಿಸುವ ಕಡಿದಾದ ಮತ್ತು ಇಳಿಜಾರಿನಿಂದ ಕೂಡಿದ ಅಣೆಬಳಿಯ ಒಳರಸ್ತೆಯಲ್ಲಿ ಭಾನುವಾರ ರಿಕ್ಷಾವೊಂದು ನಿಯಂತ್ರಣ ತಪ್ಪಿ ವಿದ್ಯುತ್ ಕಂಬಕ್ಕೆ ಡಿಕ್ಕಿಯಾಗಿದೆ. ದುರ್ಘಟನೆಯಲ್ಲಿ ಓರ್ವ ಯುವತಿ ಸ್ಥಳದಲ್ಲೇ ಮೃತಪಟ್ಟಿದ್ದರೆ, ಇಬ್ಬರಿಗೆ ಗಂಭೀರ ಗಾಯಗಳಾಗಿವೆ. ಚಾಲಕ ಸಹಿತ ಇತರ ಮೂವರಿಗೆ ಸಣ್ಣಪುಟ್ಟ ಗಾಯಗಳಾಗಿವೆ.


ಅರ್ಕುಳ ನಿವಾಸಿ ಪ್ರಿಯಾ(25) ಮೃತಪಟ್ಟವರು. ಪ್ರಿಯಾ ಕುಟುಂಬ ಆದ್ಯಪಾಡಿ ದೇವಸ್ಥಾನಕ್ಕೆ ತೆರಳಿ ಮನೆಗೆ ಮರಳುತ್ತಿದ್ದ ವೇಳೆ ದುರ್ಘಟನೆ ಸಂಭವಿಸಿದೆ.


ಘಟನೆ ವಿವರ: ಅರ್ಕುಳದ(ಫರಂಗಿಪೇಟೆ) ಕುಟುಂಬವೊಂದರ ಐವರು ಆದ್ಯಪಾಡಿಯಲ್ಲಿ ಪೂಜೆ ಸಲ್ಲಿಸಿ, ಮನೆಗೆ ಮರಳುತ್ತಿದ್ದ ವೇಳೆ ರಿಕ್ಷಾ ಚಾಲಕನಿಗೆ ಗುರುಪುರ ಪಂಚಾಯಿತಿ ಬಳಿ ಗೂಗಲ್ ಮ್ಯಾಪ್‌ನಲ್ಲಿ ಹೆದ್ದಾರಿ ಸಂಪರ್ಕಿಸುವ ಈ ಒಳರಸ್ತೆಯನ್ನು ತೋರಿಸಿದ್ದಾರೆ ಎನ್ನಲಾಗಿದೆ. ಅದರನ್ವಯ ಚಾಲಕ ಪದ್ಮನಾಭ ಅವರು ಇಳಿಜಾರು ರಸ್ತೆಯಲ್ಲಿ ರಿಕ್ಷಾ ಚಲಾಯಿಸುತ್ತಿದ್ದಂತೆ ಬ್ರೇಕ್‌ವಿಫಲಗೊಂಡಿದ್ದು, ಚಾಲಕನ ನಿಯಂತ್ರಣ ತಪ್ಪಿದ ರಿಕ್ಷಾ ರಸ್ತೆ ಬದಿಯ ವಿದ್ಯುತ್ ಕಂಬಕ್ಕೆ ಬಡಿದು ಪಲ್ಟಿ ಹೊಡೆದಿದೆ. ಘಟನೆ ವೇಳೆ ಚಾಲಕ ಸಹಿತ ರಿಕ್ಷಾದಲ್ಲಿ ಆರು ಮಂದಿ ಇದ್ದರು. ಈ ಪೈಕಿ ಯುವತಿ ಸ್ಥಳದಲ್ಲೇ ಸಾವನ್ನಪ್ಪಿದ್ದರೆ,ಇತರ ಐವರು ಗಾಯಾಳುಗಳನ್ನು ಮಂಗಳೂರಿನ ಸರ್ಕಾರಿ ಆಸ್ಪತ್ರೆಗೆ ಸಾಗಿಸಲಾಗಿದೆ. ಗಾಯಾಳುಗಳ ಪೈಕಿ ಮಹಿಳೆ ಸಹಿತ ಇಬ್ಬರ ಸ್ಥಿತಿ ಚಿಂತಾಜನಕವಾಗಿದೆ ಎಂದು ಬಜ್ಪೆ ಪೊಲೀಸರು ತಿಳಿಸಿದ್ದಾರೆ. ಬಜ್ಪೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net