

ಗುರುಪುರ: ಬಜಪೆ ಪೊಲೀಸ್ ಠಾಣಾ ವ್ಯಾಪ್ತಿಯ ಗುರುಪುರ ಸೇತುವೆಯಿಂದ ಯುವಕನೋರ್ವ ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಶನಿವಾರ ಮಧ್ಯಾಹ್ನ ನಡೆದಿದೆ.
ಮಂಗಳೂರಿನ ಕುಲಶೇಖರ ಬಳಿಯ ಕನ್ನಗುಡ್ಡೆ ನಿವಾಸಿ ಅಮರನಾಥ್(36) ಎಂಬುವರು ಶನಿವಾರ ಮಧ್ಯಾಹ್ನ ಬೈಕ್‌ನಲ್ಲಿ ಬಂದು ಬೈಕನ್ನು ಸೇತುವೆ ಬದಿಯಲ್ಲಿ ನಿಲ್ಲಿಸಿ ನದಿಗೆ ಹಾರಿದ್ದನ್ನು ಸ್ಥಳೀಯರು ಗಮನಿಸಿ ಬಜಪೆ ಪೋಲೀಸರಿಗೆ ಮಾಹಿತಿ ನೀಡಿದ್ದರು. ಸ್ಥಳಕ್ಕೆ ದೌಡಾಯಿಸಿದ ಪೊಲೀಸರು ಅಗ್ನಿಶಾಮಕ ದಳದ ಮುಳುಗು ತಜ್ಞರ ಸಹಾಯದಿಂದ ನದಿಯಲ್ಲಿ ಶೋಧ ಕಾರ್ಯ ನಡೆಸಿ ಪಡುಶೆಡ್ಡೆ ಎಂಬಲ್ಲಿ ಮೃತದೇಹವನ್ನು ಮೇಲಕ್ಕೆತ್ತಿದ್ದಾರೆ.
್ಠವೃತ್ತಿಯಲ್ಲಿ ಕಟ್ಟಡ ಕಾರ್ಮಿಕನಾಗಿದ್ದ ಅಮರಾನಾಥ್ ಮೂಲತಃ ಉರ್ವಸ್ಟೋರ್ ನಿವಾಸಿಯಾಗಿದ್ದು, ಹಾಲಿ ಕುಲಶೇಖರ ಕನ್ನಗುಡ್ಡೆ ಎಂಬಲ್ಲಿ ವಾಸವಿದ್ದರು. ಕಳೆದ ಏಳು ವರ್ಷಗಳಿಂದ ಮಾನಸಿಕ ಕಾಯಿಲೆಯಿಂದ ಬಳಲುತ್ತಿದ್ದರು ಎನ್ನಲಾಗಿದೆ. ಅಮರಾನಾಥ್ ಅವರ ಚಿಕ್ಕಮ್ಮನ ಮಗ ರಘುವೀರ್ ಎಂಬುವರು ಬಜಪೆ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.