ಬಾಗಲಕೋಟೆಯಲ್ಲಿ ಸಿದ್ಧೇಶ್ವರ ಶ್ರೀಗಳಿಗೆ ಗುರುನಮನ

BKT VEER
ಬಾಗಲಕೋಟೆಯಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಬಿವಿವಿ ಸಂಘದ ಕಾರ್ಯಾಧ್ಯಕ್ಷ ವೀರಣ್ಣ ಚರಂತಿಮಠ ಸಿದ್ಧೇಶ್ವರ ಶ್ರೀಗಳ ಗುರುನಮನ ಕಾರ್ಯಕ್ರಮದ ಬಗ್ಗೆ ಮಾಹಿತಿ ನೀಡಿದರು. ಬಿವಿವಿ ಸಂಘದ ಗೌರವ ಕಾರ್ಯದರ್ಶಿ ಮಹೇಶ ಅಥಣಿ, ಬಸವರಾಜ ಮುಕ್ಕುಪ್ಪಿ ಮತ್ತಿತರರು ಇದ್ದರು.
Published on

ಬಾಗಲಕೋಟೆ: ವಿಜಯಪುರದ ಜ್ಞಾನಯೋಗಾಶ್ರಮದ ಪರಮಪೂಜ್ಯ ಲಿಂ. ಸಿದ್ಧೇಶ್ವರ ಮಹಾಸ್ವಾಮಿಗಳಿಗೆ ಗುರುನಮನ ಕಾರ್ಯಕ್ರಮ ಫೆ. 7 ಮತ್ತು 8 ರಂದು ಬಾಗಲಕೋಟೆಯಲ್ಲಿ ಹಮ್ಮಿಕೊಳ್ಳಲಾಗಿದೆ.

ಬಾಗಲಕೋಟೆಯ ಬಸವೇಶ್ವರ ವೀರಶೈವ ವಿದ್ಯಾವರ್ಧಕ ಸಂಘ, ಆಧ್ಯಾತ್ಮಿಕ ಪ್ರವಚನ ಸೇವಾ ಸಮಿತಿ, ಚರಂತಿಮಠದ ಶಿವಾನುಭವ ಸಮಿತಿ ಹಾಗೂ ಗೆಳೆಯರ ಬಳಗದ ವತಿಯಿಂದ ಗುರುನಮನ ಕಾರ್ಯಕ್ರಮ ಜರುಗಲಿದೆ ಎಂದು ಬಿವಿವಿ ಸಂಘದ ಕಾರ್ಯಾಧ್ಯಕ್ಷ ವೀರಣ್ಣ ಚರಂತಿಮಠ ಹೇಳಿದರು.

ಸೋಮವಾರ ಸುದ್ದಿಗೋಷ್ಠಿಯಲ್ಲಿ ಈ ವಿಷಯ ತಿಳಿಸಿದ ಅವರು, ನಗರದ ಚರಂತಿಮಠದ ಶಿವಾನುಭವ ಮಂಟಪದಲ್ಲಿ ಎರಡು ದಿನ ಸಂಜೆ 6.30 ರಿಂದ 8.30 ಗಂಟೆವರೆಗೆ ನಡೆಯುವ ಗುರುನಮನದ ಸಾನ್ನಿಧ್ಯವನ್ನು ಚರಂತಿಮಠದ ಪ್ರಭು ಸ್ವಾಮೀಜಿ ಹಾಗೂ ವಿಜಯಪುರ ಜ್ಞಾನಯೋಗಾಶ್ರಮದ ಗುರುಗಳಾದ ಬಸವಲಿಂಗ ಸ್ವಾಮೀಜಿ ವಹಿಸುವರು. ಆಧ್ಯಾತ್ಮಿಕ ಪ್ರವಚನ ಸೇವಾ ಸಮಿತಿ ಅಧ್ಯಕ್ಷರಾದ ವೀರಣ್ಣ ಚರಂತಿಮಠ ಅಧ್ಯಕ್ಷತೆ ವಹಿಸುವರು. ಫೆ. 7 ರಂದು ನಡೆಯುವ ಕಾರ್ಯಕ್ರಮದಲ್ಲಿ ಸಂದಿಗವಾಡದ ರಾಜಗುರು ಹಿರೇಮಠದ ಮೃತ್ಯುಂಜಯ ಸ್ವಾಮೀಜಿ, ವಿಶ್ರಾಂತ ಕುಲಪತಿ ಡಾ.ಮೀನಾ ಚಂದಾವರಕರ, ಪದವಿಪೂರ್ವ ಶಿಕ್ಷಣ ಇಲಾಖೆ ವಿಶ್ರಾಂತ ಉಪನಿರ್ದೇಶಕ ಜಿ.ಎ.ತಿಗಡಿ, ವಿಜಯಪುರದ ಪತ್ರಕರ್ತ ವಾಸುದೇವ ಹೆರಕಲ್ ನುಡಿನಮನ ಸಲ್ಲಿಸಲಿದ್ದಾರೆ. ಬಾಗಲಕೋಟೆ ಗಾಯಕಿ ಕುಮಾರಿ ಆದಿತಿ ಖಂಡೇವಾಲ ಹಾಗೂ ಶ್ರೇಯಾ ಜೋರಾಪುರ ಗೀತನಮನ ಸಲ್ಲಿಸಲಿದ್ದಾರೆ ಎಂದು ತಿಳಿಸಿದರು.

ಫೆ. 8 ರಂದು ಸಂಜೆ 6.30ಕ್ಕೆ ಶುರುವಾಗುವ ಕಾರ್ಯಕ್ರಮದಲ್ಲಿ ಚಿಕ್ಕೋಡಿ ತಾಲೂಕಿನ ಸದಲಗಾ ಗುರುದೇವಾಶ್ರಮದ ಡಾ.ಶ್ರದ್ಧಾನಂದ ಸ್ವಾಮೀಜಿ, ಇಂಡಿ ತಾಲೂಕಿನ ಅಥರ್ಗಾದ ಈಶಪ್ರಸಾದ ಸ್ವಾಮೀಜಿ, ವಿಜಯಪುರ ಜ್ಞಾನ ಯೋಗಾಶ್ರಮದ ಸಂಗಮೇಶ್ವರ ಸ್ವಾಮೀಜಿ, ಸಾರ್ವಜನಿಕ ಶಿಕ್ಷಣ ಇಲಾಖೆ ವಿಶ್ರಾಂತ ನಿರ್ದೇಶಕ ಎಸ್.ಆರ್.ಮನಹಳ್ಳಿ ನುಡಿನಮನ ಸಲ್ಲಿಸಲಿದ್ದಾರೆ. ಬಾಗಲಕೋಟೆ ಗಾಯಕಿಯರಾದ ಸುಮಂಗಲಾ ಹಿರೇಮಠ ಹಾಗೂ ಕುಮಾರಿ ಆದಿತಿ ಖಂಡೇವಾಲ ಗೀತಗಾನ ನಮನ ಸಲ್ಲಿಸಲಿದ್ದಾರೆ ಎಂದು ಚರಂತಿಮಠ ವಿವರಿಸಿದರು.

ಸುದ್ದಿಗೋಷ್ಠಿಯಲ್ಲಿ ಬಿವಿವಿ ಸಂಘದ ಗೌರವ ಕಾರ್ಯದರ್ಶಿ ಮಹೇಶ ಅಥಣಿ, ಪಂಡಿತ ಆರಬ್ಬಿ, ಬಸವರಾಜ ಮುಕ್ಕುಪ್ಪಿ, ಬಸವರಾಜ ಭಗವತಿ ಮತ್ತಿತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net