

ಯಲಬುರ್ಗಾ: ಶರಣರ ವಚನಗಳನ್ನು ಆಲಿಸುವುದರಿಂದ ಮನಸ್ಸಿಗೆ ಶಾಂತಿ ದೊರಕಿ ಪರಿಶುದ್ಧವಾಗುತ್ತದೆ ಎಂದು ಕಪ್ಪತಗುಡ್ಡ ಬಸವಬೆಟ್ಟದ ಯೋಗ ಗುರುಮಾತೆ ಓಂಕಾರೇಶ್ವರಿ ಮಾತಾಜಿ ಹೇಳಿದರು.
ಪಟ್ಟಣದ ಖಾಸಗಿ ಸಭಾಂಗಣದಲ್ಲಿ ಬಸವ ಶಿವಯೋಗ ಸಮಿತಿ ಏರ್ಪಡಿಸಿದ್ದ ಬಸವಾದಿ ಶರಣರಾದ ಕುರಬರ ಗೊಲ್ಲಾಳೇಶ್ವರ ಹಾಗೂ ಕುಂಬಾರ ಗುಂಡಯ್ಯರವರ ಶರಣೋತ್ಸವಕ್ಕೆ ಗುರುವಾರ ಚಾಲನೆ ನೀಡಿ ಮಾತನಾಡಿದರು. ಮಾನವೀಯ ಗುಣಗಳನ್ನು ಅಳವಡಿಸಿಕೊಂಡು ಮಾನವ ಜನ್ಮವನ್ನು ಸಾರ್ಥಕ ಪಡಿಸಿಕೊಳ್ಳಬೇಕು. ಶಿವಶರಣರ ಚರಿತ್ರೆ ತಿಳಿಯುವ ಮೂಲಕ ಭಕ್ತಿ ಶ್ರದ್ಧೆಗೆ ದೊರಕುವ ಪ್ರತಿಫಲವನ್ನು ಅನುಭವಿಸಬೇಕು ಎಂದರು.
ಗೊಲ್ಲಾಳೇಶ್ವರ ಕುರಿಯ ಹಿಕ್ಕಿಯನ್ನು ಲಿಂಗವೆಂದು ಪರಿಭಾವಿಸಿ ತಿಪ್ಪೆಯಲ್ಲಿ ಹುಗಿದು ದಿನನಿತ್ಯ ಕುರಿಯ ಹಾಲಿನ ಅಭಿಷೇಕ ಮಾಡುತ್ತಾನೆ. ತಂದೆ ಬಲ್ಲಾಳನು ಮಗನ ಅಂಧಕಾರವನ್ನು ಕಂಡು ಮರಗುವುದುಂಟು. ಆಗ ಮುಗ್ಧಮಗ ಗೊಲ್ಲಾಳ ಇಲ್ಲಿ ಲಿಂಗುವಿದೆ ಅದಕ್ಕೆ ನಾನು ಪ್ರತಿನಿತ್ಯ ಪೂಜಿಸುತ್ತೇನೆ ಬೇಕಿದ್ದರೆ ಅಗಿದು ನೋಡಿ ಎನ್ನುತ್ತಾನೆ. ಆಗ ತಂದೆ ತಿಪ್ಪೆಯನ್ನು ಅಗೆದಾಗ ಅಲ್ಲಿ ಶ್ರೀಶೈಲ ಮಲ್ಲಿಕಾರ್ಜುನನ ಶಿವಲಿಂಗವೇ ಉದ್ಭವಿಸುತ್ತದೆ. ಈಗ ಅಲ್ಲಿ ಗೊಲ್ಲಾಳೇಶ್ವರನ ಮಂದಿರ ಸ್ಥಾಪನೆಯಾಗಿದೆ ಎಂದರು.
ಈಶ್ವರಿ ವಿಶ್ವವಿದ್ಯಾಲಯದ ಸಂಚಾಲಕಿ ಬ್ರಹ್ಮ ಕುಮಾರಿ ಗೀತಕ್ಕ ಮಾತನಾಡಿ, ಪ್ರತಿನಿತ್ಯ ಯೋಗ ಮಾಡುವುದರಿಂದ ಪವಿತ್ರರಾಗಲು ಸಾಧ್ಯ ಎಂದರು. ಅಪರ ಸರ್ಕಾರಿ ವಕೀಲ ಎಂ.ಎಸ್.ಪಾಟೀಲ, ಆರ್‌ಡಿಸಿಸಿ ಬ್ಯಾಂಕ್ ನಿರ್ದೇಶಕ ಶೇಖರಗೌಡ ಉಳ್ಳಾಗಡಿ, ಶೈಲಶ್ರೀ ಪಾಟೀಲ ಮಾತನಾಡಿದರು.
ಇದಕ್ಕೂ ಮುನ್ನ ಕುರಬರ ಗೊಲ್ಲಾಳೇಶ್ವರ ಹಾಗೂ ಕುಂಬಾರ ಗುಂಡಯ್ಯ ಅವರ ಭಾವಚಿತ್ರಕ್ಕೆ ಗಣ್ಯರು ಪುಷ್ಪಾರ್ಪಣೆ ಸಲ್ಲಿಸಿದರು. ಅನ್ನಪೂರ್ಣ ಟೆಂಗಿನಕಾಯಿ ಪ್ರಾಥಮಿಕ ಶಾಲಾ ಮಕ್ಕಳು ವಚನಗಳನ್ನು ಹಾಡಿದರು.
ಪಪಂ ಮಾಜಿ ಉಪಾಧ್ಯಕ್ಷೆ ಮೀನಾಕ್ಷಮ್ಮ ಮಲಕಸಮುದ್ರ, ಎನ್‌ಜಿಒ ಅಧ್ಯಕ್ಷ ಸಿದ್ದಲಿಂಗಪ್ಪ ಶ್ಯಾಗೋಟಿ, ಪ್ರಮುಖರಾದ ಮುದಕಪ್ಪ ಸಜ್ಜನ, ವಿರೂಪಾಕ್ಷಪ್ಪ ಹನುಮಶೆಟ್ಟಿ, ಮಾಹಗುಂಡಪ್ಪ ಕಟಗೇರಿ, ಫಕೀರಪ್ಪ ಗಾಣಗೇರ, ಬಸವರಾಜ ಹಳ್ಳಿ ಇತರರಿದ್ದರು.