

ಮೈಸೂರು: ಒಂದು ಶತಮಾನದ ಹಿಂದೆಯಷ್ಟೇ ಇದ್ದ ಗುರುಮಲ್ಲೇಶ್ವರರು ಕಾಯಕ ಮತ್ತು ದಾಸೋಹ ತತ್ವಗಳಿಗೆ ಒತ್ತು ನೀಡಿದರು. ಇತಿಹಾಸದ ಪ್ರಜ್ಞೆಯ ಕೊರತೆಯಿಂದಾಗಿ ಇಂತಹ ಶರಣರನ್ನು ಕುರಿತು ಬರಹಗಳು ಸಾಧ್ಯವಾಗಿಲ್ಲ ಎಂದು ಸಾಹಿತಿ ಪ್ರೊ. ಎಂ.ಚಂದ್ರಶೇಖರಯ್ಯ ಅಭಿಪ್ರಾಯಪಟ್ಟರು.
ದೇವನೂರು ಮಠದಲ್ಲಿ ಇತ್ತೀಚೆಗೆ ಆಯೋಜಿಸಿದ್ದ ಡಿ.ಎಂ. ಮಹದೇವಮೂರ್ತಿ ರಚಿಸಿದ್ದ ಡಾ. ಮಹೇಂದ್ರಮೂರ್ತಿ ದೇವನೂರು ಸಂಪಾದಿಸಿರುವ ಶ್ರೀಗುರುಮಲ್ಲೇಶ್ವರ ಪ್ರಭಾವಲಯ ಕೃತಿ ಕುರಿತು ಮಾತನಾಡಿದರು.
ದೇವನೂರಿನ ಗುರುಮಲ್ಲೇಶ್ವರರು ಮತ್ತು ಪರಂಪರೆ 12ನೇ ಶತಮಾನದ ಬಸವೇಶ್ವರ ತತ್ವ ಚಿಂತನೆಗಳನ್ನು ಸರಳವಾಗಿ ಪ್ರಚಾರ ಮಾಡಿ ಮಾನವ ಪ್ರೇಮವನ್ನು ಬಿತ್ತಿ ಜನರನ್ನು ಅರಿವಿಗೆ ತಂದವರು. ಈ ಕೃತಿಯು ಶ್ರೀಮಠದ ಇತಿಹಾಸದ ಮೈಲಿಗಲ್ಲು. ನೂರಾರು ಶರಣರ ಚರಿತ್ರೆ ಇರುವ ಈ ಕೃತಿಗೆ ಶರಣ ಸಾಹಿತ್ಯದಲ್ಲಿ ಅನನ್ಯ ಸ್ಥಾನವಿದೆ. ಮುಂದೆ ರಚನೆಯಾಗುವ ಅನೇಕ ಕೃತಿಗಳಿಗೆ ಇದು ಪರಾಮರ್ಶನ ಗ್ರಂಥವಾಗಿದೆ ಎಂದು ಬಣ್ಣಿಸಿದರು.
ದೇವನೂರು ಮಠದ ಅಧ್ಯಕ್ಷ ಶ್ರೀಮಹಾಂತ ಸ್ವಾಮೀಜಿ ಕೃತಿ ಬಿಡುಗಡೆಗೊಳಿಸಿದರು. ಕೃತಿಯ ಸಂಪಾದಕ ಡಾ. ಮಹೇಂದ್ರ ಮೂರ್ತಿ ದೇವನೂರು, ಮುಖಂಡರಾದ ಪ್ರೊ. ಡಿ.ಎಂ. ಶಾಂತಪ್ಪ, ಗುರುಶಾಂತಮ್ಮ, ಮಲ್ಲಿಕಾರ್ಜುನ್ ಆರಾಧ್ಯ, ಚಿನ್ನಸ್ವಾಮಿ, ಬಸವರಾಜಪ್ಪ, ಗುರುಸ್ವಾಮಿ, ಡಿ.ಎನ್.ಲೋಕಪ್ಪ, ಡಿ.ಎಸ್. ಶಿವಮಾದಪ್ಪ, ಡಿ.ಎಂ. ಗುರುಮಲ್ಲೇಶ್, ಡಿ.ಎಸ್. ಗಿರೀಶ್, ಡಿ.ಎಸ್. ಸುರೇಶ್, ರೇಚಣ್ಣ, ಮೀನಾ, ಪಂಚಾಕ್ಷರಿಸ್ವಾಮಿ ಇತರರು ಇದ್ದರು.