

ಮಂಗಳೂರು: ಗುರುಕುಲ ಕಲಾ ಪ್ರತಿಷ್ಠಾನ ಜಿಲ್ಲಾ ಘಟಕದ ವತಿಯಿಂದ ಸ್ವಾತಂತ್ರೊೃೀತ್ಸವದ ಅಂಗವಾಗಿ ಸ್ವಾತಂತ್ರೃ ಸಂಭ್ರಮ ಕವಿಗೋಷ್ಠಿ, ಸನ್ಮಾನ ಸಮಾರಂಭ ಮಂಗಳವಾರ ನಗರದ ಸ್ಕೌಟ್ಸ್ ಆ್ಯಂಡ್ ಗೈಡ್ಸ್ ಸಭಾಂಗಣದಲ್ಲಿ ನಡೆಯಿತು.
ಕಲ್ಲಚ್ಚು ಪ್ರಕಾಶನದ ಪ್ರಕಾಶಕ ಮಹೇಶ ಆರ್.ನಾಯಕ್ ಉದ್ಘಾಟಿಸಿದರು. ಸಮಾಜದ ಅಂಕು ಡೊಂಕುಗಳನ್ನು ತಿದ್ದುವ ಪ್ರಯತ್ನ ಸಾಹಿತ್ಯದಿಂದ ಆಗಬೇಕು. ಸಮಾಜದ ಆಶಯಕ್ಕೆ ಪೂರಕವಾದ ಕವನಗಳು ಯುವ ಕವಿಗಳಿಂದ ಹೊರ ಹೊಮ್ಮಬೇಕು ಎಂದರು.
ವೈದ್ಯ, ಸಾಹಿತಿ ಡಾ.ಸುರೇಶ್ ನೆಗಳಗುಳಿ ಅತಿಥಿಯಾಗಿದ್ದರು. ಕವಿಗೋಷ್ಠಿಯ ಮೂಲಕ ಸ್ವಾತಂತ್ರೃ ಸಂಭ್ರಮಾಚರಣೆ ಅರ್ಥಪೂರ್ಣ. ಮನುಷ್ಯ ಗೊತ್ತಿದ್ದೂ ಮಾಡುವ ತಪ್ಪುಗಳಿಂದಾಗಿ ನಿಜವಾದ ಸ್ವಾತಂತ್ರೃಕ್ಕೆ ಧಕ್ಕೆಯಾಗುತ್ತಿದೆ. ಮಕ್ಕಳಿಗೆ ಉತ್ತಮ ಸಂಸ್ಕಾರ ನೀಡುವ ಮೂಲಕ ಗಾಂಧೀಜಿ ತತ್ವದಂತೆ ಅಹಿಂಸಾ ಧರ್ಮವನ್ನು ಪಾಲಿಸಬೇಕು ಎಂದರು.
ಸಾಹಿತಿ ಕುಡುಮಲ್ಲಿಗೆ ಕೃಷ್ಣ ಶೆಟ್ಟಿ ಕವಿಗೋಷ್ಠಿಯ ಅಧ್ಯಕ್ಷತೆ ವಹಿಸಿದ್ದರು. ಆಧುನಿಕ ಯುಗದ ಧಾವಂತಕ್ಕೆ ಸಿಲುಕಿರುವ ಯುವ ಜನತೆಯಲ್ಲಿ ಕವನ, ಲೇಖನ ಬರೆಯುವ ಹವ್ಯಾಸ ಕಡಿಮೆಯಾಗುತ್ತಿದೆ. ಇಂತಹ ಗೋಷ್ಠಿಗಳು ಸಾಹಿತ್ಯದ ಬೆಳವಣಿಗೆಗೆ ಪೂರಕ ಎಂದರು.
ಗುರುಕುಲ ಪ್ರತಿಷ್ಠಾನದ ಜಿಲ್ಲಾಧ್ಯಕ್ಷೆ ಮಾನಸ ವಿಜಯ್ ಕೈತಂಜೆ ಅಧ್ಯಕ್ಷತೆ ವಹಿಸಿದ್ದರು. ಸ್ಕೌಟ್ಸ್ ಆ್ಯಂಡ್ ಗೈಡ್ಸ್‌ನ ಜಿಲ್ಲಾ ಕಾರ್ಯದರ್ಶಿ ಎಂ.ಜೆ. ಕಜೆ ಉಪಸ್ಥಿತರಿದ್ದರು.
ಸಾಹಿತಿ ಡಿ.ಐ.ಅಬೂಬಕ್ಕರ್ ಕೈರಂಗಳ, ಕುಡುಮಲ್ಲಿಗೆ ಕೃಷ್ಣ ಶೆಟ್ಟಿ, ಯು.ಆರ್.ಶೆಟ್ಟಿ ಅವರನ್ನು ಸನ್ಮಾನಿಸಲಾಯಿತು. ಕಾರ್ಯಕ್ರಮದ ಸಂಚಾಲಕ ಡೊಂಬಯ್ಯ ಇಡ್ಕಿದು ಸ್ವಾಗತಿಸಿದರು. ಪುಪ್ಷಲತಾ ಹಾಗೂ ಸಾಕ್ಷಿ ಕಾರ್ಯಕ್ರಮ ನಿರೂಪಿಸಿದರು. 25 ಮಂದಿ ಕವಿಗಳು ಸ್ವರಚಿತ ಕವನಗಳನ್ನು ವಾಚಿಸಿದರು.