

ಶೃಂಗೇರಿ: ಸನಾತನ ಸಂಸ್ಕೃತಿಯಲ್ಲಿ ಗುರುಕುಲ ಮತ್ತು ಗೋಶಾಲೆ ಒಂದೇ ನಾಣ್ಯದ ಎರಡು ಮುಖಗಳಿದ್ದಂತೆ ಎಂದು ಯುರೋಪಿನ ಅದ್ವೈತ ವೇದಾಂತ ಆಶ್ರಮದ ಮುಖ್ಯಸ್ಥ ಸಚ್ಚಿದಾನಂದ ಆಚಾರ್ಯ ಹೇಳಿದರು.
ಕೂತಗೋಡು ಗ್ರಾಪಂ ಬೇಸೂರಿನ ಶ್ರೀ ಜಗದ್ಗುರು ಚಂದ್ರಶೇಖರ ಭಾರತೀ ಗೋಶಾಲೆಗೆ ಶುಕ್ರವಾರ ಭೇಟಿ ನೀಡಿ ಮಾತನಾಡಿ, ಹಿಂದು ಧರ್ಮದಲ್ಲಿ ಗೋವಿಗೆ ತಾಯಿ ಸ್ಥಾನ ನೀಡಿ ಪೂಜಿಸಲಾಗುತ್ತದೆ. ಭಾರತದಲ್ಲಿ ಗೋಮಾತೆ ದರ್ಶನದಿಂದ ದಿನ ನಿತ್ಯದ ಕಾರ್ಯ ಪ್ರಾರಂಭವಾಗುತ್ತದೆ. ಗೋವಿನ ಉತ್ಪನ್ನಗಳು ಶ್ರೇಷ್ಠ. ಮಲೆನಾಡು ಗಿಡ್ಡ ತಳಿಯ ಜಾನುವಾರುಗಳ ಗೋಶಾಲೆಯನ್ನು ಯುರೋಪಿನ ಅದ್ವೈತ ವೇದಾಂತ ಆಶ್ರಮದಲ್ಲಿ ಪ್ರಾರಂಭಿಸಲು ಯೋಜನೆ ರೂಪಿಸಲಾಗುತ್ತಿದೆ ಎಂದು ತಿಳಿಸಿದರು.
ಆಶ್ರಮದ ಆಂಡ್ರೀವ್ ಡೆವಿಡ್ ಬೌಲೇ ಮಾತನಾಡಿ, ಗೋವುಗಳ ಸಂತತಿ ಉಳಿಸಿ ಬೆಳೆಸುವ ಜವಾಬ್ದಾರಿಯನ್ನು ಪ್ರತಿಯೊಬ್ಬರೂ ಹೊರಬೇಕು. ಗೋಮಾತೆ ಜಗತ್ತಿನ ತಾಯಿ. ಅವಳನ್ನು ಉಳಿಸುವುದು ನಮ್ಮೆಲ್ಲರ ಕರ್ತವ್ಯವಾಗಬೇಕು ಎಂದು ಹೇಳಿದರು.
ಗೋಶಾಲೆ ಮುಖ್ಯಸ್ಥ ರಜಿತ್ ಗೌಡ ಮಾತನಾಡಿ, ಮಲೆನಾಡು ಗಿಡ್ಡ ತಳಿ ಜಾನುವಾರುಗಳು ಗಾತ್ರದಲ್ಲಿ ಕಿರಿದು. ಆದರೆ ಅತಿ ಹೆಚ್ಚು ರೋಗನಿರೋಧಕ ಶಕ್ತಿ ಹೊಂದಿವೆ. ಗಿಡ್ಡ ತಳಿಯ ಗೋವುಗಳ ಹಾಲು ಔಷಧೀಯ ಗುಣಗಳನ್ನು ಹೊಂದಿದ್ದು, ಆರೋಗ್ಯಕ್ಕೆ ಉತ್ತಮ ಎಂದರು.
ವಿಕ್ಟರ್, ಗೋಶಾಲೆಯ ತಿಮ್ಮಪ್ಪ ಗೌಡ, ಶ್ರೀದೇವಿ, ಶಂಕರಾನಂದ ಇದ್ದರು.