

ಗುರುಗುಂಟಾ: ನಾರಾಯಣಪುರ ಬಲದಂಡೆ ಹಾಗೂ ರಾಂಪುರ ಏತ ನೀರಾವರಿ ನಾಲೆಗಳಿಗೆ ಏ.20ರತನಕ ನೀರು ಹರಿಸಲು ಆಗ್ರಹಿಸಿ ಒಂಬತ್ತು ದಿನಗಳಿಂದ ನಡೆಸಿದ ಅಹೋರಾತ್ರಿ ಧರಣಿಯನ್ನು ಭಾನುವಾರ ತಾತ್ಕಾಲಿಕವಾಗಿ ಹಿಂಪಡೆದ ರೈತ ಸಂಘ ಹಾಗೂ ಹಸಿರು ಸೇನೆಯು ಗ್ರೇಡ್-2 ತಹಸೀಲ್ದಾರ್ ಬಸವರಾಜ ಜಳಕಿಮಠಗೆ ಮನವಿ ಸಲ್ಲಿಸಿತು.
ಸಂಘದ ತಾಲೂಕು ಅಧ್ಯಕ್ಷ ದುರ್ಗಾಪ್ರಸಾದ್ ಮಾತನಾಡಿ, ಇತ್ತೀಚೆಗೆ ನೀರಾವರಿ ಸಲಹಾ ಸಮಿತಿ ಸಭೆಯಲ್ಲಿ ಚರ್ಚಿಸಿ ಜಾರಿಗೊಳಿಸಿದ ಅವೈಜ್ಞಾನಿಕ ನೀತಿಗೆ ನಾವು ಒಪ್ಪುವುದಿಲ್ಲ. ಮತ್ತೊಂದು ಸಲ ಐಸಿಸಿ ಸಭೆ ಆಯೋಜಿಸಿ, ರೈತರನ್ನು ಆಹ್ವಾನಿಸಬೇಕು. ಜಂಟಿಯಾಗಿ ಚರ್ಚಿಸಲು ಅವಕಾಶ ಕಲ್ಪಿಸಬೇಕು. ಏ.20ರವರೆಗೆ ಎರಡೂ ನಾಲೆಗಳಿಗೆ ನೀರು ಹರಿಸಬೇಕು. ವಿಫಲವಾದಲ್ಲಿ ಪ್ರತಿ ಹಳ್ಳಿಯ ಜನ-ಜಾನುವಾರುಗಳೊಂದಿಗೆ ನೀರಾವರಿ ಇಲಾಖೆ ಮುಂದೆ ಧರಣಿ ಹಮ್ಮಿಕೊಳ್ಳಲಾಗುವುದು ಎಂದು ತಿಳಿಸಿದರು.
ಸೇನೆಯ ಜಿಲ್ಲಾ ಕಾರ್ಯಾಧ್ಯಕ್ಷ ಆನಂದ ಕುಂಬಾರ, ಹೋಬಳಿ ಅಧ್ಯಕ್ಷ ರಾಮಣ್ಣ ಅಡಿಕೆರ್, ಪ್ರಮುಖರಾದ ಬಸ್ಸಣ್ಣ, ತಿಪ್ಪಣ್ಣ ಹವಾಲ್ದಾರ್, ಹೊಳೆಪ್ಪ, ಮಹಾಂತೇಶ ನಾಯಕ, ಬಾಷಾಸಾಬ್, ಹನುಮಂತ, ಲಕ್ಷ್ಮಣ, ಆದಪ್ಪ ಜೋಗರ್ ಇದ್ದರು.