

ಗುರುಗುಂಟಾ: ಕಲ್ಯಾಣ ಕರ್ನಾಟಕ ಭಾಗದ ಪ್ರಸಿದ್ಧ ಜಾತ್ರೆಗಳಲ್ಲೊಂದಾದ ಸುಕ್ಷೇತ್ರ ಗುರುಗುಂಟಾ ಶ್ರೀ ಅಮರೇಶ್ವರ ಮಹಾರಥೋತ್ಸವ ಶುಕ್ರವಾರ ಸಂಜೆ ಸಹಸ್ರಾರು ಭಕ್ತರ ಸಮ್ಮುಖದಲ್ಲಿ ವಿಜೃಂಭಣೆಯಿಂದ ಜರುಗಿತು.
ಇದಕ್ಕೂ ಮುನ್ನ ಗುರುಗುಂಟಾ, ಗುಂತಗೋಳ್ ಸಂಸ್ಥಾನಿಕರು ಮತ್ತು ತಾತ್ಕಾಲಿಕ ತಹಸಿಲ್ ಕಚೇರಿಯಿಂದ ಶಾಸಕರು, ಸಹಾಯಕ ಆಯುಕ್ತರು, ತಹಸೀಲ್ದಾರ್ ಅವರು ವಾದ್ಯ-ಮೇಳಗಳ ಸಮೇತ ದೇಗುಲಕ್ಕೆ ತೆರಳಲಾಯಿತು. ಉತ್ಸವ ಮೂರ್ತಿಯನ್ನು ಪಲ್ಲಕ್ಕಿಯಲ್ಲಿರಿಸಿ ರಥದವರೆಗೆ ಮೆರವಣಿಗೆ ನಡೆಸಿ ಐದು ಪ್ರದಕ್ಷಿಣೆ ಹಾಕಿ ತೇರಲ್ಲಿ ಪ್ರತಿಷ್ಠಾಪಿಸಲಾಯಿತು. ಬಳಿಕ ಅಮರೇಶ್ವರ ಗುರು ಅಭಿನವ ಗಜದಂಡ ಶಿವಾಚಾರ್ಯರು ರಥಾರೂಢರಾದರು.
ಗುರುಗುಂಟಾ ಸಂಸ್ಥಾನಿಕ ರಾಜಾ ಸೋಮನಾಥ ನಾಯಕ ಅವರು ವಿಶೇಷ ಪೂಜೆ ಸಲ್ಲಿಸಿ ರಥೋತ್ಸವಕ್ಕೆ ಚಾಲನೆ ನೀಡಿದರು. ಭಕ್ತರು ಜಯಘೋಷಗಳೊಂದಿಗೆ ತೇರೆಳೆದರು. ಕಡೆಬಸವಣ್ಣನ ದೇಗುಲದ ಪಾದಕಟ್ಟೆವರೆಗೆ ಸಾಗಿ ಮರಳಿ ಮೂಲ ಸ್ಥಾನ ಸೇರಿತು. ಈ ವೇಳೆ ರಾಜ್ಯವಲ್ಲದೆ ಹೊರ ರಾಜ್ಯಗಳಿಂದ ಆಗಮಿಸಿದ್ದ ಸಹಸ್ರಾರು ಭಕ್ತರು ಉತ್ತತ್ತಿ, ಕಲ್ಲುಸಕ್ಕರೆ, ಬಾಳೆಹಣ್ಣು ಸಮರ್ಪಿಸಿ ಭಕ್ತಿಯ ಪರಾಕಾಷ್ಠೆ ಮೆರೆದರು.
ಹರಕೆ ಹೊತ್ತು ಹಲವಾರು ಕಿಮೀ ದೂರ ಕಾಲ್ನಡಿಗೆಯಲ್ಲಿ ಬಂದಿದ್ದ ಭಕ್ತರು ದೇವಸ್ಥಾನದಲ್ಲಿ ದೀರ್ಘದಂಡ ನಮಸ್ಕಾರ ಹಾಕಿದರು. ಬಿಲ್ವಾರ್ಚನೆ ಸೇರಿ ಧಾರ್ಮಿಕ ವಿಧಿ-ವಿಧಾನಗಳೊಂದಿಗೆ ಪೂಜೆ ನೆರವೇರಿಸಿದರು. ನವದಂಪತಿಗಳು ರಥೋತ್ಸವ ವನ್ನು ಕಣ್ತುಂಬಿಕೊಂಡರು. ಲಿಂಗಸುಗೂರು ಡಿವೈಎಸ್ಪಿ ದತ್ತಾತ್ರೇಯ ಕಾರ್ನಾಡ್ ನೇತೃತ್ವದಲ್ಲಿ ಪೊಲೀಸ್ ಬಂದೋಬಸ್ತ್ ನೀಡಲಾಗಿತ್ತು.
ಗುರುಗುಂಟಾ ಸಂಸ್ಥಾನಿಕ ರಾಜಾ ಸೋಮನಾಥ ನಾಯಕ, ರಾಣಿ ಜಯಲಕ್ಷ್ಮೀ, ರಾಣಿ ತಾರಾ, ಗುಂತಗೋಳ್ ಸಂಸ್ಥಾನಿಕ ರಾಜಾ ರಾಯಪ್ಪ ನಾಯಕ, ಮಾಜಿ ಸಂಸದ ರಾಜಾ ಅಮರೇಶ್ವರ ನಾಯಕ, ರಾಜಾ ಶ್ರೀನಿವಾಸ ನಾಯಕ, ಶಾಸಕ ಮಾನಪ್ಪ ಡಿ.ವಜ್ಜಲ್, ಎಂಎಲ್ಸಿ ಶರಣಗೌಡ ಬಯ್ಯಪುರ, ಮಾಜಿ ಶಾಸಕ ಅಮರೇಗೌಡ ಪಾಟೀಲ್ ಬಯ್ಯಪುರ, ಪ್ರತಾಪಗೌಡ ಪಾಟೀಲ್, ಎಎಸ್ಪಿ ಪಿ.ಹರೀಶ್, ತಹಸೀಲ್ದಾರ್ ಶಂಶಾಲಂ, ಮಸ್ಕಿ ತಹಸೀಲ್ದಾರ್ ಹಾಗೂ ಅಮರೇಶ್ವರ ದೇವಸ್ಥಾನ ಇಒ ಡಾ.ಯಲ್ಲಪ್ಪ ಯರಗೋಳ್, ಡಿವೈಎಸ್ಪಿ ದತ್ತಾತ್ರೇಯ ಕಾರ್ನಾಡ್ ಇತರರಿದ್ದರು.