

ಗುರುಗುಂಟಾ: ಎರಡು ದಿನಗಳಿಂದ ಸುರಿಯುತ್ತಿರುವ ಮಳೆ ರೈತನ ಮೊಗದಲ್ಲಿ ಮಂದಹಾಸ ಮೂಡಿಸಿದರೆ, ಕೆಲವೆಡೆ ಅವಾಂತರಗಳನ್ನು ಸೃಷ್ಟಿಸಿ ಆತಂಕಕ್ಕೆ ದೂಡಿದೆ.
ಬಿರು ಬಿಸಿಲಿಗೆ ಬೇಸತ್ತ ಜನಕ್ಕೆ ಕೊಂಚ ತಂಪಿನ ವಾತಾವರಣ ಸೃಷ್ಟಿಸಿದೆಯಾದರೂ, ಗ್ರಾಮದಲ್ಲಿ ಕೆಲ ಮಣ್ಣಿನ ಮನೆಗಳು ಕುಸಿದಿವೆ. ತಗ್ಗು ಪ್ರದೇಶದ ಮನೆಗಳಿಗೆ ನೀರು ನುಗ್ಗಿದ್ದು, ಗಿಡ-ಮರಗಳು, ವಿದ್ಯುತ್ ಕಂಬಗಳು ನೆಲಕ್ಕುರುಳಿವೆ.
ವಿದ್ಯುತ್ ತಂತಿ ಮರದ ಮೇಲೆ ಬಿದ್ದು ಸುತ್ತಲಿನ ಕೆಲ ಹಳ್ಳಿ, ದೊಡ್ಡಿ-ತಾಂಡಾಗಳಲ್ಲಿ ವಿದ್ಯುತ್ ಸ್ಥಗಿತಗೊಂಡು ತೊಂದರೆಯಾಗಿದೆ. ಮನೆ, ಹೋಟೆಲ್ ಮೇಲೆ ಹಾಕಲಾದ ಶೀಟ್‌ಗಳು ಹಾರಿ ಹೋಗಿ ನಷ್ಟಕ್ಕೆ ಸಿಲುಕಿಸಿದೆ. ಹಳ್ಳ-ಕೊಳ್ಳಗಳು ತುಂಬಿ ಹರಿಯುತ್ತಿವೆ.
ರಭಸದ ಮಳೆ ನೀರಿನಿಂದ ಗ್ರಾಮದ ಬಹುತೇಕ ಚರಂಡಿಗಳು ತುಂಬಿ ಕೊಳಚೆ ರಸ್ತೆ ಮೇಲೆ ಹರಿಯುತ್ತಿದ್ದು, ಜನತೆಗೆ ಸಂಕಷ್ಟ ತಂದೊಡ್ಡಿದೆ. ರಸ್ತೆಗಳು ದುರ್ನಾತ ಬೀರುತ್ತಿವೆ. ಸಮತಟ್ಟಿಲ್ಲದ ಕೆಲ ರಸ್ತೆಗಳಲ್ಲಿ ನೀರು ನಿಂತು ಹೊಂಡದಂತಾಗಿವೆ. ಮದುವೆ ಸೇರಿದಂತೆ ಶುಭ ಕಾರ್ಯಗಳಿರುವ ಕುಟುಂಬಗಳಿಗೆ ಫಜೀತಿಯಾಗಿದೆ.