

ಗುರುಗುಂಟ: ಕಳೆದ ಎರಡು ದಿನಗಳಿಂದ ಹೋಬಳಿಯಲ್ಲಿ ಸುರಿಯುತ್ತಿರುವ ಜಿಟಿಜಿಟಿ ಮಳೆ, ಬಾಡುತ್ತಿರುವ ಬೆಳೆಗಳಿಗೆ ಜೀವ ಕಳೆತಂದಿದೆ. ಹವಾಮಾನ ಇಲಾಖೆ ಈ ಬಾರಿ ಮುಂಗಾರು ಮಳೆ ಕಡಿಮೆ ಇದ್ದು, ಬಿತ್ತನೆ ಕೈಗೊಳ್ಳುವುದು ಸೂಕ್ತವಲ್ಲವೆಂದು ಪತ್ರಿಕೆಗಳ ಮೂಲಕ ಸಮಜಜಾಯಿಸಿ ಹೇಳಿಕೆ ನೀಡಿದರೂ, ರೈತ ಉಳಿಮೆ ಮಾಡಿದ್ದ. ಬೆಳೆ ಹೂ ಬಿಟ್ಟು ಕಾಯಿ ಕಟ್ಟುವ ವೇಳೆಗೆ ಮಳೆ ಕೈಕೊಟ್ಟಿದ್ದರಿಂದ ಕಂಗಾಲಾಗಿದ್ದ.
ಸೋಮವಾರದಿಂದ ಆಗಾಗ್ಗೆ ಸುರಿಯುತ್ತಿರುವ ಜಿಟಿಜಿಟಿ ಮಳೆಯಿಂದ ಬೆಳೆಗಳು ಮರುಜೀವ ಪಡೆದಿದ್ದು, ಅಧಿಕವಲ್ಲದಿದ್ದರೂ ಅಲ್ಪ ಮಟ್ಟಿಗೆ ವರಮಾನ ನೀಡುವ ಸಾಧ್ಯತೆ ಇದೆ. ದನ ಕರುಗಳಿಗೂ ಮೇವು-ಕುಡಿವ ನೀರಿಗೆ ಅನುಕೂಲವಾಗಿದೆ.
ನಾರಾಯಣಪುರ ಬಲದಂಡೆ ನಾಲೆಯ ಮೂಲಕ ನೀರು ಹರಿಸಿಕೊಳ್ಳಬೇಕೆಂದರೂ ವಾರಾಬಂದಿ ತೊಡಕಾಗಿದೆ. ಬೋರ್‌ವೆಲ್ ಹಾಗೂ ತೆರೆದ ಬಾವಿ ನೀರು ಪಡೆಯಬೇಕೆಂದರೂ ಅಸಮರ್ಪಕ ವಿದ್ಯುತ್ ಕೊಡಲಿ ಪೆಟ್ಟು ನೀಡಿದೆ.
ರೈತ ಸಂಪರ್ಕ ಕೇಂದ್ರದ ಮಾಹಿತಿಯಂತೆ ಗುರುಗುಂಟ ಹೋಬಳಿಯಲ್ಲಿ ಒಟ್ಟು 21075 ಹೆಕ್ಟೇರ್ ಕ್ಷೇತ್ರ ಬಿತ್ತನೆ ಗುರಿ ಹೊಂದಿದ್ದು, ಅದರಲ್ಲಿ 16568 ಹೆಕ್ಟೇರ್ ಪ್ರದೇಶ ಬಿತ್ತನೆಯಾಗಿದೆ. ಜೂನ್‌ನಿಂದ ಸೆಪ್ಟೆಂಬರ್ ವರೆಗೆ ವಾಡಿಕೆಯಂತೆ 275 ಮಿ.ಮೀ. ಮಳೆ ಆಗಬೇಕಿತ್ತು, ಆದರೆ 225 ಮಿ.ಮೀ. ಸುರಿದಿದ್ದು, ಶೇ.18 ಕಡಿಮೆ ಆಗಿದೆ.
ಗುರುಗುಂಟ ಹೋಬಳಿಯಲ್ಲಿ 2100 ಹೆಕ್ಟೇರ್ ಅಚ್ಚುಕಟ್ಟು ಭೂಪ್ರದೇಶವಿದ್ದು, ಉಳಿದ ಕ್ಷೇತ್ರದಲ್ಲಿ ಪ್ರಮುಖ ಬೆಳೆಗಳಾದ ತೊಗರಿಯನ್ನು 8,160 ಹೆಕ್ಟೇರ್ ಪೈಕಿ 8110, ಸಜ್ಜೆ 7647 ಹೆಕ್ಟೇರ್ ಪೈಕಿ 6115, ಹತ್ತಿ 417 ಹೆಕ್ಟೇರ್ ಪೈಕಿ 2270 ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆಯಾಗಿದೆ. ವಾಡಿಕೆ ಮಳೆಯಾಗದಿದ್ದರಿಂದ ಇಳುವರಿ ಕಡಿಮೆ ಬರುವ ಸಂಭವವಿದೆ.ಶಿವರಾಜ್ ಯಲಗಲದಿನ್ನಿಕೃಷಿ ಅಧಿಕಾರಿ, ರೈತ ಸಂಪರ್ಕ ಕೇಂದ್ರ ಗುರುಗುಂಟ ವರುಣನ ಅವಕೃಪೆ, ನಾರಾಯಣಪುರ ಬಲದಂಡೆ ನಾಲೆಯ ವಾರಾಬಂದಿ, ವಿದ್ಯುತ್ ಅಸಮರ್ಪಕ ಸೇವೆ, ಹವಾಮಾನ ವೈಪರಿತ್ಯದಿಂದ ಮಳೆಯಾಶ್ರಿತ ಪ್ರದೇಶಗಳ ನಿರೀಕ್ಷಿತ ಬೆಳೆ ಬರುವ ಭರವಸೆ ಹುಸಿಯಾಗಿದೆ.ಅಮರಪ್ಪ ಗೋಸಲೇರ್ರೈತ ಸಂಘದ ಮುಖಂಡ, ಗುರುಗುಂಟ