ನಾಟಕ, ಜಾನಪದ ಕಲೆಗೆ ಹೆಚ್ಚು ಮಹತ್ವ: ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಜಂಟಿ ನಿರ್ದೇಶಕ ಬಲವಂತರಾವ್ ಪಾಟೀಲ್ ಹೇಳಿಕೆ

Gurudevotsava ceremony Mandya
Published on

ಮಂಡ್ಯ: ನಮ್ಮ ನೆಲದಲ್ಲಿ ಪೌರಾಣಿಕ ನಾಟಕ ಮತ್ತು ಜಾನಪದ ಕಲೆಗಳಿಗೆ ಹೆಚ್ಚು ಮಹತ್ವವಿದೆ. ಸಾಕಷ್ಟು ಕಲಾವಿದರು ಇದ್ದಾರೆ. ಆದರೆ ಶಾಸ್ತ್ರೀಯ ಸಂಗೀತ, ನೃತ್ಯ ಕಲೆಗಳಿಗೆ ಅಷ್ಟು ಆಸಕ್ತಿ ಕಾಣಿಸುತ್ತಿಲ್ಲ ಎಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಜಂಟಿ ನಿರ್ದೇಶಕ ಬಲವಂತರಾವ್ ಪಾಟೀಲ್ ಹೇಳಿದರು.

ನಗರದ ಪಿಇಎಸ್ ಕಾಲೇಜಿನ ಸ್ವಾಮಿ ವಿವೇಕಾನಂದ ರಂಗಮಂದಿರದಲ್ಲಿ ಗುರುದೇವ ಅಕಾಡೆಮಿ ಆಫ್ ಫೈನ್ ಆರ್ಟ್ಸ್‌ನಿಂದ ಆಯೋಜಿಸಿದ್ದ ಗುರುದೇವೋತ್ಸವ ಸಮಾರಂಭದಲ್ಲಿ ಮಾತನಾಡಿದ ಅವರು, ಮುಂಬರುವ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ವಚನಸಾಹಿತ್ಯ, ತತ್ವಪದ ಸಾಹಿತ್ಯ, ಶಾಸ್ತ್ರೀಯ ಸಂಗೀತದ ಬಗ್ಗೆ ಗೋಷ್ಠಿ, ಕಾರ್ಯಕ್ರಮ ಆಗಬೇಕಿದೆ ಎಂದರು.

ಲಲಿತಾಕಲಾ ಕ್ಷೇತ್ರಕ್ಕೆ ಗುರುದೇವ ಲಲಿತಾಕಲಾ ಅಕಾಡೆಮಿ ಕೊಡುಗೆ ಅಪಾರ. ನಾಡಿನುದ್ದಗಲಕ್ಕೂ ಭರತನಾಟ್ಯ-ನೃತ್ಯಕಲಾ ಕ್ಷೇತ್ರದಲ್ಲಿ ಅಕಾಡೆಮಿಯ ಶಿಷ್ಯ ಬಳಗ ಅಪಾರ ಸಂಖ್ಯೆಯಲ್ಲಿದೆ. ರಾಷ್ಟ್ರ, ಅಂತಾರಾಷ್ಟ್ರೀಯ ಮಟ್ಟದಲ್ಲಿಯೂ ಗಮನಸೆಳೆಯುವಂತ ಕಾರ್ಯಕ್ರಮಗಳನ್ನು ನೀಡುತ್ತಿದ್ದಾರೆ. ಇಂತಹ ಕಲಾ ಪ್ರಕಾರಗಳ ವೇದಿಕೆಗಳು ಮಕ್ಕಳ ಸುಪ್ತ ಪ್ರತಿಭೆಯನ್ನು ಅನಾವರಣಗೊಳಿಸಲು ಬೇಕಿದೆ ಎಂದರು.

ಜಿಲ್ಲಾ ಕಸಾಪ ಕೋಶಾಧ್ಯಕ್ಷ ಬಿ.ಎಂ.ಅಪ್ಪಾಜಪ್ಪ, ಕರ್ನಾಟಕ ಸಂಘದ ಅಧ್ಯಕ್ಷ ಪ್ರೊ.ಬಿ.ಜಯಪ್ರಕಾಶಗೌಡ, ಕಲಾವಿಮರ್ಶಕ ವಿಜಯಶಂಕರ್, ನಟರಾಜ ಕಲಾನಿಕೇತನ ನಿರ್ದೇಶಕ ವಿದ್ವಾನ್ ಪ್ರಕಾಶ್ ಅಯ್ಯರ್, ಅಕಾಡೆಮಿಯ ವಿದ್ವಾನ್ ಚೇತನಾ, ಮುಖ್ಯಸ್ಥ ರಾಧಾಕೃಷ್ಣ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net