

ಮಂಡ್ಯ: ಬದುಕಿನ ಯಾತ್ರೆ ಸುದೀರ್ಘವಾದುದು. ಈ ಕಾಲಘಟ್ಟದಲ್ಲಿ ನಮಗೆ ಬೇಕಾದಂತಹ ಒಳ್ಳೆಯ ಮೌಲ್ಯಗಳನ್ನು ಅಳವಡಿಸಿಕೊಳ್ಳದಿದ್ದಲ್ಲಿ ಬದುಕು ನರಕವಾಗುತ್ತದೆ ಎಂದು ಆದಿಚುಂಚನಗಿರಿ ಮಠದ ಪೀಠಾಧ್ಯಕ್ಷ ಡಾ.ನಿರ್ಮಲಾನಂದನಾಥ ಸ್ವಾಮೀಜಿ ಹೇಳಿದರು.
ನಗರದ ಪಿಇಎಸ್ ಕಾಲೇಜಿನ ಸ್ವಾಮಿ ವಿವೇಕಾನಂದ ರಂಗಮಂದಿರದಲ್ಲಿ ಶುಕ್ರವಾರ ಸಂಜೆ ಗುರುದೇವ ಲಲಿತಕಲಾ ಅಕಾಡೆಮಿಯ ರಜತೋತ್ಸವದ ಅಂಗವಾಗಿ ಆಯೋಜಿಸಿರುವ ಮೂರು ದಿನದ ಗುರುದೇವೋತ್ಸವದ ಉದ್ಘಾಟನಾ ಸಮಾರಂಭದ ಸಾನಿಧ್ಯ ವಹಿಸಿ ಮಾತನಾಡಿದರು.
ನಮ್ಮ ಬದುಕು ಅಸತೋಮ ಸದ್ಗಮಯ, ತಮಸೋಮ ಜ್ಯೋತಿರ್ಗಮಯದ ಕಡೆ ಇರಬೇಕು. ಮನುಷ್ಯನ ಜೀವನದಲ್ಲಿ ಉತ್ತಮ ಮೌಲ್ಯಗಳನ್ನು ಅಳವಡಿಸಿಕೊಂಡು ಸಮಾಜದಲ್ಲಿ ಸಾಗಬೇಕು. ಒಂದು ವೇಳೆ ಮೌಲ್ಯ ಅಳವಡಿಸಿಕೊಳ್ಳದ ಮನುಷ್ಯನ ಜೀವನ ಸದಾ ನರಕವಾಗಿರುತ್ತದೆ. ಉತ್ತಮ ಭವಿಷ್ಯ ರೂಪಿಸಿಕೊಂಡು ಸಮಾಜದಲ್ಲಿ ಹೆಸರು ಗಳಿಸಬೇಕೆಂದು ತಿಳಿಸಿದರು.
ತುಮಕೂರು ವಿಶ್ವವಿದ್ಯಾನಿಲಯದ ವಿಶ್ರಾಂತ ಕುಲಪತಿ ಡಾ.ಸಿದ್ದೇಗೌಡ ಮಾತನಾಡಿ, ಕಲೆಯನ್ನು ಹೆಚ್ಚು ಪೋಷಿಸುವವರಿಗೆ ಹೆಚ್ಚಿನ ವ್ಯವಹಾರದ ಜ್ಞಾನವಿರುತ್ತದೆ. ಕಲೆ ಎಂಬುದು ಶಿಸ್ತು, ಸಮಯ ಪ್ರಜ್ಞೆಯನ್ನು ಕಲಿಸುತ್ತದೆ. ಸಮಾಜದ ಔಪಚಾರಿಕ ಮತ್ತು ಅನೌಪಚಾರಿಕ ನಿಯಂತ್ರಣವನ್ನು ನಮ್ಮ ನಡವಳಿಕೆಯ ಮೇಲೆ, ನಮ್ಮ ಜೀವನದ ಕ್ರಮದ ಮೇಲೆ, ನಮ್ಮ ಅಭಿವೃದ್ದಿ ಕ್ರಮದ ಮೇಲೆ ನಿಯಂತ್ರಿಸುವ ಶಕ್ತಿ ಕಲೆಗೆ ಇದೆ. ಇಂಥ ಕಲೆಯನ್ನು ಪ್ರೋತ್ಸಾಹಿಸುತ್ತಾ, ಬೆಳೆಸುತ್ತಾ, ಪಸರಿಸುತ್ತಾ ಹೋಗಬೇಕು ಎಂದರು.
ಮನೋವೈದ್ಯ ಡಾ.ಟಿ.ಎಸ್.ಸತ್ಯನಾರಾಯಣರಾವ್, ಕರ್ನಾಟಕ ಸಂಘದ ಅಧ್ಯಕ್ಷ ಪ್ರೊ.ಬಿ.ಜಯಪ್ರಕಾಶಗೌಡ, ಅಕಾಡೆಮಿ ವ್ಯವಸ್ಥಾಪಕ ನಿರ್ದೇಶಕ ಪಿ.ಎಂ.ರಾಧಾಕೃಷ್ಣ, ಕಲಾ ನಿರ್ದೇಶಕಿ ಡಾ.ಚೇತನಾ ರಾಧಾಕೃಷ್ಣ ಇತರರಿದ್ದರು.