

ಮಂಡ್ಯ: ಗುರುದೇವ ಅಕಾಡೆಮಿ ಆಫ್ ಫೈನ್ ಆರ್ಟ್ಸ್ ಸಂಸ್ಥೆ ವತಿಯಿಂದ ಸೆ.14 ರಿಂದ 16ರವರೆಗೆ ನಗರದ ಪಿಇಎಸ್ ಕಾಲೇಜಿನ ವಿವೇಕಾನಂದ ರಂಗಮಂದಿರದಲ್ಲಿ ಗುರುದೇವೋತ್ಸವ ಶಾಸ್ತ್ರೀಯ ನೃತ್ಯಗಳ ರಾಷ್ಟ್ರೀಯ ಹಬ್ಬ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಸಂಸ್ಥೆ ನಿರ್ದೇಶಕಿ ಡಾ.ಚೇತನಾ ರಾಧಾಕೃಷ್ಣ ಹೇಳಿದರು.
14ರಂದು ಸಂಜೆ 4 ಗಂಟೆಗೆ ನಡೆಯಲಿರುವ ಕಾರ್ಯಕ್ರಮವನ್ನು ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ ಉದ್ಘಾಟಿಸುವರು. ಶಾಸಕ ರವಿಕುಮಾರ್ ಗಣಿಗ ಅಧ್ಯಕ್ಷತೆ ವಹಿಸುವರು. ಕರ್ನಾಟಕ ಸಂಘದ ಅಧ್ಯಕ್ಷ ಪ್ರೊ.ಬಿ.ಜಯಪ್ರಕಾಶಗೌಡ ಪ್ರಾಸ್ತಾವಿಕ ನುಡಿಗಳನ್ನಾಡಲಿದ್ದು, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಜಂಟಿ ನಿರ್ದೇಶಕ ಬಲವಂತರಾವ್ ಪಾಟೀಲ್ ಮುಖ್ಯ ಅತಿಥಿಯಾಗಿ, ಕೂಚಿಪುಡಿ-ಕಥಕ್ಕಳಿ ಪ್ರತಿಪಾದಕ, ಕಲಾ ವಿಮರ್ಶಕ ಮುಂಬೈನ ವಿಜಯ್‌ಶಂಕರ್ ವಿಶೇಷ ಆಹ್ವಾನಿತರಾಗಿ ಪಾಲ್ಗೊಳ್ಳುವರು. ಅಂದು ನಟರಾಜ ಕಲಾನಿಕೇತನ್ ನಿರ್ದೇಶಕ ಪ್ರಕಾಶ್ ಐಯ್ಯರ್ ಅವರಿಗೆ ಗುರುದೇವ ಪ್ರಶಸ್ತಿ ನೀಡಿ ಗೌರವಿಸಲಾಗುವುದು ಎಂದು ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
15ರಂದು ಸಂಜೆ 4 ಗಂಟೆಗೆ ವೇದಿಕೆ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಜಿಲ್ಲಾ ಕಸಾಪ ಕೋಶಾಧ್ಯಕ್ಷ ಬಿ.ಎಂ.ಅಪ್ಪಾಜಪ್ಪ ವಹಿಸಲಿದ್ದು, ಬೆಳಕು ವಿನ್ಯಾಸಕಾರ ಎಂ.ಎಲ್.ರಾಜನ್ ಮತ್ತು ತಬಲ ಕಲಾವಿದ ಪಂಡಿತ್ ಭೀಮಾಶಂಕರ್ ಬಿದನೂರ್ ಅವರಿಗೆ ಗುರುದೇವ ಪ್ರಶಸ್ತಿ ಪ್ರದಾನ ಮಾಡಲಾಗುವುದು. 16ರಂದು ಸಂಜೆ 4ಗಂಟೆಗೆ ಪಿಇಟಿ ಅಧ್ಯಕ್ಷ ಕೆ.ಎಸ್.ವಿಜಯಾನಂದ ಅಧ್ಯಕ್ಷತೆಯಲ್ಲಿ ಸಮಾರೋಪ ಸಮಾರಂಭವಿದ್ದು, ಮನೋವೈದ್ಯ ಡಾ.ಟಿ.ಎಸ್.ಸತ್ಯನಾರಾಯಣರಾವ್, ಭಾರತೀಯ ರೆಡ್‌ಕ್ರಾಸ್ ಸಂಸ್ಥೆ ಜಿಲ್ಲಾ ಸಭಾಧ್ಯಕ್ಷೆ ಡಾ.ಮೀರಾ ಶಿವಲಿಂಗಯ್ಯ ಭಾಗವಹಿಸಲಿದ್ದಾರೆ. ಇದೇ ವೇಳೆ ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿ ಅಧ್ಯಕ್ಷೆ ವಿದುಷಿ ಶುಭಾ ಧನಂಜಯ ಅವರಿಗೆ 2024ನೇ ಸಾಲಿನ ಗುರುದೇವ ಪ್ರಶಸ್ತಿ ಪ್ರದಾನ ಮಾಡಲಾಗುವುದು. ಮೂರು ದಿನವೂ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮವಿರಲಿದೆ ಎಂದು ವಿವರಿಸಿದರು.
ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ಪಿ.ಎಂ.ರಾಧಾಕೃಷ್ಣ, ಎಂ.ಎಲ್.ರಾಜನ್ ಇದ್ದರು.