

ಮಾಯಕೊಂಡ: ಶಿಕ್ಷಕರು ಹಾಗೂ ಪಾಲಕರು ವಿದ್ಯಾರ್ಥಿಗಳ ಶಿಕ್ಷಣ ಬಂಡಿಯ ಎರಡು ಚಕ್ರಗಳಿದ್ದಂತೆ ಎಂದು ಪಾಂಡೋಮಟ್ಟಿ ಹಾಗೂ ಕಂಬತ್ತಳ್ಳಿ ವಿರಕ್ತ ಮಠದ ಡಾ. ಗುರುಬಸವ ಸ್ವಾಮೀಜಿ ಹೇಳಿದರು.
ಇತ್ತೀಚೆಗೆ ದಾವಣಗೆರೆ ತಾಲೂಕಿನ ಅತ್ತಿಗೆರೆ ಗ್ರಾಮದಲ್ಲಿರುವ ಶ್ರೀ ಕೇಸರಿ ವಿದ್ಯಾಸಂಸ್ಥೆಯ ರಜತ ಮಹೋತ್ಸವ ಮತ್ತು ಶಾಲೆಯ ನೂತನ ಕಟ್ಟಡ ಉದ್ಘಾಟಿಸಿ ಮಾತನಾಡಿದರು.
ಪಾಲಕರು ಮಕ್ಕಳಿಗೆ ಉತ್ತಮ ಶಿಕ್ಷಣ ನೀಡುವ ಮೂಲಕ ಅವರನ್ನೇ ಆಸ್ತಿಯನ್ನಾಗಿ ಮಾಡಬೇಕು. ಮೊಬೈಲ್ನಿಂದ ಮಕ್ಕಳನ್ನು ದೂರವಿಡಬೇಕು ಎಂದರು.
ಮಾಜಿ ಶಾಸಕ ಎಂ. ಬಸವರಾಜ್ ನಾಯ್್ಕ ಮಾತನಾಡಿ, ಮಕ್ಕಳ ಶೈಕ್ಷಣಿಕ ಅಭಿವೃದ್ಧಿಗೆ ಒತ್ತು ನೀಡಿ ಪಾಲಕರು ಅವರನ್ನು ಉತ್ತಮ ವ್ಯಕ್ತಿಗಳನ್ನಾಗಿಸಲು ಸರ್ವ ಪ್ರಯತ್ನ ಮಾಡಬೇಕು ಎಂದರು.
ಪ್ರಗತಿಪರ ರೈತ ಹೆದ್ನೇ ಮುರುಗೇಶಪ್ಪ ಮಾತನಾಡಿ, ಮಕ್ಕಳಿಗೆ ವಿದ್ಯಾಭ್ಯಾಸದ ಜತೆಗೆ ಕೃಷಿ ಚಟುವಟಿಕೆಗಳ ಕುರಿತು ಅರಿವು ಮೂಡಿಸಬೇಕು ಎಂದರು.
ಜಿ.ಎಸ್. ಅನಿತ್ಕುಮಾರ್ ಮಾತನಾಡಿ, ತಾಯಂದಿರು ಮಕ್ಕಳಿಗೆ ಉತ್ತಮ ಸಂಸ್ಕಾರ ಕಲಿಸಬೇಕು. ಸಂಸ್ಕಾರ ಹಾಗೂ ಸದ್ಗುಣಗಳನ್ನು ಬಲ್ಲವನು ಸಮಾಜದಲ್ಲಿ ಉತ್ತಮ ಪ್ರಜೆಯಾಗಿ ಬದುಕಬಲ್ಲ ಎಂದರು.
ಪಿಎಲ್ಡಿ ಬ್ಯಾಂಕ್ ಮಾಜಿ ಅಧ್ಯಕ್ಷ ಹೊನ್ನನಾಯಕನಹಳ್ಳಿ ಮುರುಗೇಂದ್ರಪ್ಪ ಮಾತನಾಡಿ, ಶಿಕ್ಷಣದೊಂದಿಗೆ ಅಧ್ಯಾತ್ಮ ಸೇರಿ ಸಾಮಾಜಿಕ ಸಹಭಾಗಿತ್ವ ಕಲಿಸುವುದು ಅಗತ್ಯವಾಗಿದೆ ಎಂದರು.
ಈ ವೇಳೆ ಗಣ್ಯರು ಕೇಸರಿ ವಿದ್ಯಾಸಂಸ್ಥೆಯ ರಜತ ಮಹೋತ್ಸವದ ಸ್ಮರಣ ಸಂಚಿಕೆ ಬಿಡುಗಡೆಗೊಳಿಸಿದರು. ಸಂಸ್ಥೆಯ ಕಾರ್ಯದರ್ಶಿ ಎ.ಜಿ. ನಾಗಪ್ಪ ಅಧ್ಯಕ್ಷತೆ ವಹಿಸಿದ್ದರು. ಸಂಸ್ಥೆಯ ಅಧ್ಯಕ್ಷ ಎ.ಒ. ರವಿ, ಕೃಪಾ ಸಂಘಟನೆಯ ರಾಜ್ಯ ಸಂಚಾಲಕ ಎ.ಎನ್. ಪ್ರಸನ್ನಕುಮಾರ್ ಉಪಸ್ಥಿತರಿದ್ದರು.
ಸಂಸ್ಥೆಯ ನಿರ್ದೇಶಕ ಸಿದ್ದೇಶ್ ಸ್ವಾಗತಿಸಿದರು. ನಿಜಲಿಂಗಪ್ಪ ನಿರೂಪಿಸಿದರು. ಎ.ಒ. ನಂದೀಶ್ ವಂದಿಸಿದರು.