ಗುರುವಿಗೆ ಸದಾ ಸಿಗಲಿದೆ ಗೌರವ

19 vikram 11
Published on

ವಿಜಯವಾಣಿ ಸುದ್ದಿಜಾಲ ಧಾರವಾಡ

ಸಮಾಜದಲ್ಲಿನ ಬಹುತೇಕ ವೃತ್ತಿಗಳಲ್ಲಿ ನಿವೃತ್ತಿ ಇದೆ. ಆದರೆ ಶಿಕ್ಷಕರಿಗೆ ನಿವೃತ್ತಿ ಇಲ್ಲ. ಸದಾ ಗುರು ಎಂದೇ ಕರೆಯಿಸಿಕೊಳ್ಳುವ ಶಿಕ್ಷಕರು ಜನಮಾನಸದಲ್ಲಿ ನೆಲೆಗೊಂಡು ಗೌರವಿಸಲ್ಪಡುತ್ತಾರೆ. ಶಿಕ್ಷಣ ಪಡೆದ ವಿದ್ಯಾರ್ಥಿ ಎಷ್ಟೇ ಉನ್ನತ ಹುದ್ದೆಯಲ್ಲಿದ್ದರೂ ಗುರುವನ್ನು ಕಂಡಾಗ ಗೌರವ ತೋರುತ್ತಾನೆ ಎಂದು ಹಿರಿಯ ನ್ಯಾಯವಾದಿ ಬಿ.ಎಲ್​. ಪಾಟೀಲ ಹೇಳಿದರು.

ನಗರದ ಬಾಸೆಲ್​ ಮಿಶನ್​ ಶಿಕ್ಷಕ, ಶಿಕಿಯರ ತರಬೇತಿ ಸಂಸ್ಥೆಯ ಹಳೇ ವಿದ್ಯಾರ್ಥಿಗಳ ಸಂಘದ ವತಿಯಿಂದ ಏರ್ಪಡಿಸಿದ್ದ ಪ್ರಾರ್ಥನಾ ಮಂದಿರ, ವಿಜ್ಞಾನ ಪ್ರಯೋಗಾಲಯಗಳ ಉದ್ಘಾಟನೆ ಹಾಗೂ ಗುರುವಂದನಾ ಸಮಾರಂಭದಲ್ಲಿ ಮಾತನಾಡಿದರು.

ನಿವೃತ್ತ ಶಿಕ್ಷಕ ಎಸ್​.ಡಿ. ಬೇಲಿ ಕುರಿತ ಗುರುವಿನ ಗುರು ಅಭಿನಂದನ ಗ್ರಂಥವನ್ನು ಡಾ. ಎಸ್​.ಆರ್​. ಹೆಬ್ಬಾಳ ಬಿಡುಗಡೆಗೊಳಿಸಿ ಮಾತನಾಡಿ, ಬೇಲಿಯವರ ಅಭಿಮಾನಿಗಳ, ಶಿಷ್ಯರ, ಮನದಾಳದ ಮಾತುಗಳು ಲೇಖನ ರೂಪದಲ್ಲಿ ಪ್ರಕಟವಾಗಿದ್ದು, ಗುರುಗಳ ಸಮಗ್ರ ಜೀವನ ಪರಿಚಯವನ್ನು ಈ ಗ್ರಂಥ ನೀಡಲಿದೆ ಎಂದರು.

ಎಸ್​.ಡಿ. ಬೇಲಿ ಸನ್ಮಾನ ಸ್ವೀಕರಿಸಿ ಮಾತನಾಡಿ, ಶಿಕ್ಷಕ ವೃತ್ತಿ, ಆಡಳಿತಾವಧಿಯಲ್ಲಿ ಪ್ರಾಮಾಣಿಕವಾಗಿ ಕರ್ತವ್ಯ ನಿಭಾಯಿಸಲು ಪ್ರಯತ್ನಿಸಿದ್ದೇನೆ. ನನ್ನೊಬ್ಬನಿಂದಲೇ ಸಾಧನೆ ಸಾಧ್ಯವಾಗಿಲ್ಲ. ನನ್ನೊಂದಿಗೆ ಸೇವೆಯಲ್ಲಿದ್ದ ಹಿರಿ-ಕಿರಿಯ ಸಹೋದ್ಯೋಗಿಗಳ ಸಹಕಾರ, ಆಡಳಿತ ಮಂಡಳಿ ಮಾರ್ಗದರ್ಶನದಿಂದ ಸಾಧ್ಯವಾದದ್ದು. ನಾನು ಸಲ್ಲಿಸಿದ ಅಲ್ಪ ಸೇವೆಗೆ ಶಿಷ್ಯವರ್ಗ ಗೌರವಿಸಿದ್ದಕ್ಕಾಗಿ ಕೃತಜ್ಞತೆ ಎಂದರು.

ಕೆಎನ್​ಡಿ ಸಿಎಸ್​ಐ ಮುಖ್ಯ ಆಡಳಿತಾಧಿಕಾರಿ ವಿಜಯಕುಮಾರ ದಂಡಿನ್​, ನಿವೃತ್ತ ಮುಖ್ಯಾಧ್ಯಾಪಕ ವಿಲ್ಸನ್​ ಮೈಲಿ, ಎಂ.ಎಂ. ಚಿಕ್ಕಮಠ ಮಾತನಾಡಿದರು. ಕೆಎನ್​ಡಿ ಸಹ ಕಾರ್ಯದರ್ಶಿ ರೆ.ಸ್ಯಾಮುವೆಲ್​ ಕೆಲ್ವಿನ್​ ಸಾನ್ನಿಧ್ಯ ವಹಿಸಿದ್ದರು. ಸಂಸ್ಥೆ ಪ್ರಾಂಶುಪಾಲ ಡಾ. ಸುಜಯ ಹೊಂಗಲ್​ ಅಧ್ಯಕ್ಷತೆ ವಹಿಸಿದ್ದರು.

ತರಬೇತಿ ಸಂಸ್ಥೆ ಹಾಗೂ ಬಾಸೆಲ್​ ಮಿಶನ್​ ಪ್ರಾಯೋಗಿಕ ಶಾಲೆ ಶಿಕ್ಷಕರಿಗೆ ಸನ್ಮಾನಿಸಲಾಯಿತು. ನಿಂಗಪ್ಪ ನಾಗರಳ್ಳಿ, ಆರ್​.ಎಸ್​. ಹಿರೇಗೌಡರ, ಸಿದ್ದು ಹಿರೇಮಠ, ಬಸವರಾಜ ಹೊರಕೇರಿ, ನಂದಾ ಭಟ್​, ಪ್ರಭಾವತಿ ಲದ್ದಿಮಠ, ಅಜಿತ್​ ದೇಸಾಯಿ, ಪ್ರೊ. ಮಂಜುನಾಥ ಲಮಾಣಿ, ಮಹಾಂತೇಶ ಹಿರೇಮಠ, ಶಿವಯೋಗಿ ಶೀಲವಂತ, ಮಹಾದೇವ ಕರಿಕಟ್ಟಿ, ಆಶಾ ರಾಮಗಿರಿ, ಶಿವರಾಜ ದಳವಾಯಿ, ಇತರರು ಇದ್ದರು.

ರಾಜಶೇಖರ ಹೊನ್ನಪ್ಪನವರ ಸ್ವಾಗತಿಸಿದರು. ಈಶ್ವರ ಮೆಡ್ಲೇರಿ ನಿರೂಪಿಸಿದರು. ಡಾ. ಬಾಳಪ್ಪ ಚಿನಗುಡಿ ವಂದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net