ಎಂದಿಗೂ ಒಂದಾಗಿರಬೇಕು ಗುರು-ವಿರಕ್ತರು

NRGL PURAN
Published on

ನರೇಗಲ್ಲ: ಗುರು-ವಿರಕ್ತರು ಬೇರೆ ಬೇರೆಯಲ್ಲ. ಅವರು ಎಂದಿಗೂ ಒಂದಾಗಿರಬೇಕು. ಇಬ್ಬರೂ ಮಾಡುತ್ತಿರುವುದು ಒಂದೇ ಕಾರ್ಯ. ಇದರಲ್ಲಿ ಯಾವುದೇ ಭೇದ-ಭಾವ ಬೇಡ. ಇದು ಶ್ರೀ ಹಾನಗಲ್ಲ ಗುರು ಕುಮಾರೇಶ್ವರರ ಆಶಯವೂ ಆಗಿತ್ತು ಎಂದು ಹಾಲಕೆರೆ ಸಂಸ್ಥಾನದ ಮುಪ್ಪಿನ ಬಸವಲಿಂಗ ಸ್ವಾಮೀಜಿ ಹೇಳಿದರು.

ನರೇಗಲ್ಲ ಹಿರೇಮಠದ ಜಾತ್ರಾಮಹೋತ್ಸವದ ಅಂಗವಾಗಿ ನಡೆದಿರುವ ಶ್ರೀ ಗುರು ಹಾನಗಲ್ಲ ಗುರು ಕುಮಾರೇಶ್ವರರ ಪುರಾಣ ಕಾರ್ಯಕ್ರಮದ ಶುಕ್ರವಾರ ಸಮಾರಂಭದ ಸಾನ್ನಿಧ್ಯ ವಹಿಸಿ ಅವರು ಆಶೀರ್ವಚನ ನೀಡಿದರು.

ನಮ್ಮ ಗುರುಗಳಾಗಿದ್ದ ಲಿಂ. ಡಾ. ಅಭಿನವ ಅನ್ನದಾನ ಸ್ವಾಮೀಜಿಯವರ ಕನಸೂ ಸಹ ಅದೇ ಆಗಿತ್ತು. ಅದಕ್ಕಾಗಿಯೆ ನಮ್ಮ ಪಟ್ಟಾಧಿಕಾರದ ಸಮಯದಲ್ಲಿ ಧರ್ಮ ಧ್ವಜಾರೋಹಣವನ್ನು ಅವರು ನರೇಗಲ್ಲ ಹಿರೇಮಠದ ಶ್ರೀ ಮಲ್ಲಿಕಾರ್ಜುನ ಶ್ರೀಗಳವರಿಂದಲೆ ಮಾಡಿಸಿದ್ದರು. ಹಾನಗಲ್ಲ ಶ್ರೀಗಳವರ ಪುರಾಣವು ಎಲ್ಲ ಸ್ವಾಮಿಗಳು ಆತ್ಮಾವಲೋಕನ ಮಾಡಿಕೊಳ್ಳುವಂತಿದೆ. ಅವರು ತಮಗಾಗಿ ಎಂದಿಗೂ ಬದುಕದೆ ಸಮಾಜ, ಸಮಾಜೋದ್ಧಾರಕ್ಕಾಗಿ ಬದುಕಿದರು. ಇವರು ಜನಿಸಿ ಬರುತ್ತಾರೆ ಎಂಬ ಭವಿಷ್ಯವನ್ನು ಗಟ್ಟಿವಾಳಯ್ಯ ಎಂಬ ಶರಣರು 900 ವರ್ಷಗಳ ಹಿಂದೆಯೆ ಹೇಳಿದ್ದರು. ಅದು ನಿಜವಾಯಿತಲ್ಲದೆ ಒಡೆದು ಛಿದ್ರವಾಗಿದ್ದ ವೀರಶೈವ ಸಮಾಜವನ್ನು ಮತ್ತೆ ಒಂದುಗೂಡಿಸುವಲ್ಲಿ ಅವರ ಪಾತ್ರ ದೊಡ್ಡದು. ಶ್ರೀ ಅನ್ನದಾನ ಸಂಸ್ಥೆಯಿಂದ ಶೈಕ್ಷಣಿಕ ಸಂಸ್ಥೆಗಳು ಪ್ರಾರಂಭವಾಗಲು ಹಾನಗಲ್ಲ ಕುಮಾರೇಶ್ವರರೆ ಮೂಲ ಕಾರಣ. ಅವರ ಪ್ರೇರಣೆಯಿಂದಲೆ ಬೆತ್ತದ ಅಜ್ಜನವರು ಅನುಷ್ಠಾನಕ್ಕೆ ಕುಳಿತಿದ್ದು ಮತ್ತು ಶಿಕ್ಷಣ ಸಂಸ್ಥೆಗಳನ್ನು ಪ್ರಾರಂಭಿಸಿದ್ದು. ಕನ್ನಡ ನಾಡಿನ ಮಠಗಳನ್ನು ಉಳಿಸಿ, ಬೆಳೆಸಿದ ಕೀರ್ತಿ ಅವರಿಗೆ ಸಲ್ಲುತ್ತದೆ. ತಮ್ಮ ಜೀವನದ ಪ್ರತಿ ಕ್ಷಣವನ್ನು ಸಮಾಜದ ಉದ್ಧಾರಕ್ಕಾಗಿಯೆ ತೇಯ್ದವರು ಕುಮಾರೇಶ್ವರರು. ಭೌತಿಕ ವಸ್ತುಗಳಿಂದ ಯಾವ ಸುಖವೂ ಇಲ್ಲ. ಅಂತರಂಗದಲ್ಲಿ ಪರಿವರ್ತನೆಯಾದಾಗ ಮಾತ್ರ ಮನುಷ್ಯನಲ್ಲಿ ಏನಾದರೂ ಬದಲಾವಣೆಯಾಗಲು ಸಾಧ್ಯ. ಇಂತಹ ಬದಲಾವಣೆಯನ್ನು ನಿಮ್ಮಲ್ಲಿ ತರಲು ಮಲ್ಲಿಕಾರ್ಜುನ ಶ್ರೀಗಳವರು ಈ ಜಾತ್ರಾಮಹೋತ್ಸವ ಏರ್ಪಡಿಸಿ, ಪುರಾಣವನ್ನು ಹಚ್ಚಿ ನಿಮ್ಮೆಲ್ಲರಿಗೂ ಸಂಸ್ಕಾರದ ರಸದೌತಣವನ್ನೇ ಉಣಬಡಿಸುತ್ತಿರುವ ಕಾರ್ಯ ಶ್ಲಾಘನೀಯ ಎಂದರು.

ನೇತೃತ್ವ ವಹಿಸಿದ್ದ ಮಲ್ಲಿಕಾರ್ಜುನ ಸ್ವಾಮೀಜಿ ಆಶೀರ್ವಚನ ನೀಡಿ, ನಿರ್ಜೀವ ಸಮಾಜವನ್ನು ಸಜೀವಗೊಳಿಸಿದವರು ಕುಮಾರೇಶ್ವರರು. ಸಂಸ್ಕಾರವಿಲ್ಲದ ಸಮಾಜ ಸಮಾಜವೇ ಅಲ್ಲ. ಆದ್ದರಿಂದ ನೀವು ಮತ್ತು ನಿಮ್ಮ ಮಕ್ಕಳು ಮೊದಲು ಸಂಸ್ಕಾರವಂತರಾಗಬೇಕು. ಕುಮಾರೇಶ್ವರರ ವಾಣಿ ಎಂದಿಗೂ ಎಲ್ಲರಿಗೂ ಅವಶ್ಯಕವಾಗಿದೆ ಎಂದರು. ಪಂ. ಅನ್ನದಾನ ಶಾಸ್ತ್ರಿಗಳು ಮಾತನಾಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net