ಹರಿ ಭಕ್ತಿಗಿಂತಲೂ ಮಿಗಿಲು ಗುರುಭಕ್ತಿ...

Guru 1
Published on

ಸುಗುಣೇಂದ್ರ ತೀರ್ಥ ಶ್ರೀಪಾದರ ಆಶೀರ್ವಚನ

ಧರ್ಮಸ್ಥಳದ ಭಜನಾ ಪರಿಷತ್​ನಿಂದ ಗುರು ವಂದನಾ

ವಿಜಯವಾಣಿ ಸುದ್ದಿಜಾಲ ಉಡುಪಿ

ಗುರುವೆಂದರೆ ಒಂದು ವ್ಯಕ್ತಿಯಲ್ಲ, ಅದೊಂದು ಸ್ಥಾನ. ಅದೊಂದು ತತ್ತ್ವ. ಶಿಷ್ಯನಾಗದೇ ಇರುವ ಗುರು ಇದ್ದರೆ ಅದು ಭಗವಂತ ಮಾತ್ರ. ಉಳಿದವರೆಲ್ಲ ಗುರುವಾಗಿದ್ದರೂ ಅವರು ಮತ್ತೊಬ್ಬರ ಶಿಷ್ಯರು. ಯಾರ ಶಿಷ್ಯನೂ ಆಗದೆ ಕೇವಲ ಗುರು ಆಗುವವನು ಶ್ರೀಕೃಷ್ಣ ಮಾತ್ರ. ಹೀಗಾಗಿಯೇ ಆತನನ್ನು ಕೃಷ್ಣಂ ವಂದೇ ಜಗದ್ಗುರುಂ ಎನ್ನುತ್ತೇವೆ. ಆದರೆ, ದೇವರೇ ತಿಳಿಸಿದಂತೆ ಹರಿ ಭಕ್ತಿಗಿಂತಲೂ ಗುರುಭಕ್ತಿಯೇ ಮಿಗಿಲಾಗಿದೆ ಎಂದು ಪರ್ಯಾಯ ಪುತ್ತಿಗೆ ಮಠದ ಸುಗುಣೇಂದ್ರ ತೀರ್ಥ ಶ್ರೀಪಾದರು ನುಡಿದರು.

ಉಡುಪಿಯ ರಾಜಾಂಗಣದಲ್ಲಿ ಪರ್ಯಾಯ ಪುತ್ತಿಗೆ ಮಠ, ಶ್ರೀಕೃಷ್ಣ ಮಠದ ಆಶ್ರಯದಲ್ಲಿ ಶ್ರೀ ಮಂಜುನಾಥೇಶ್ವರ ಭಜನಾ ಪರಿಷತ್​ ಕೇಂದ್ರ ಸಮಿತಿ ಧರ್ಮಸ್ಥಳದ ವತಿಯಿಂದ ಗುರು ಪೂರ್ಣಿಮಾ ನಿಮಿತ್ತ ಜುಲೈ 10ರಂದು ಸಂಜೆ ಆಯೋಜಿಸಿದ್ದ ಗುರು ವಂದನಾ ಕಾರ್ಯಕ್ರಮದಲ್ಲಿ ಆಶೀರ್ವಚನ ನೀಡಿದರು.

ಗುರು ದ್ರೋಹಕ್ಕಿಲ್ಲ ಪ್ರಾಯಶ್ಚಿತ್ತ

Guru 2
ಜಗಕ್ಕೆ ಗುರು ಸ್ಥಾನದ ಮಹತ್ವ ತೋರಲು ದೇವರಾಗಿದ್ದರೂ ಸಹ ಕೃಷ್ಣನು ಶಿಷ್ಯನಂತೆ ನಟಿಸಿ ಸಾಂದೀಪನಿ ಋಷಿಯ ಸೇವೆ ಮಾಡುತ್ತಾನೆ. ತನ್ಮೂಲಕ ಯಾರು ಗುರು ಸೇವೆ ಮಾಡುವುದಿಲ್ಲವೋ ಅವರ ಸೇವೆ ತಾನೂ ಸ್ವೀಕರಿಸಲಾರೆ ಎಂದಿದ್ದಾನೆ. ದೇವರಿಗೆ ನಮ್ಮ ಮೇಲೆ ಕೋಪ ಬಂದರೂ ತೊಂದರೆ ಇಲ್ಲ. ಆದರೆ, ಗುರುವಿಗೆ ಕೋಪದಿಂದ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ. ಗುರು ದ್ರೋಹಕ್ಕೆ ಪ್ರಾಯಶ್ಚಿತ್ತವೇ ಇಲ್ಲ. ಭಗವದ್​ ಸ್ವರೂಪಿಗಳಾದ ವೇದವ್ಯಾಸರನ್ನು ಆರಾಧಿಸುವುದೇ ಗುರು ಪೂರ್ಣಿಮೆಯ ವಿಶೇಷತೆಯಾಗಿದೆ ಎಂದು ಸುಗುಣೇಂದ್ರ ಶ್ರೀ ನುಡಿದರು.

ಭಜನಾ ಸೇವೆಗೆ ಚಾಲನೆ

Ramesh
ರಾಜಾಂಗಣದಲ್ಲಿ ಬೆಳಗ್ಗೆ ಆಯೋಜಿಸಿದ್ದ ವಿಶೇಷ ಭಜನಾ ಸೇವೆಗೆ ಮಠದ ಸಾಂಸ್ಕೃತಿಕ ಕಾರ್ಯದರ್ಶಿ ರಮೇಶ ಭಟ್​ ಚಾಲನೆ ನೀಡಿದರು. ಪರಿಷತ್​ನ ಕೇಂದ್ರ ಸಮಿತಿಯ ಭಜನಾ ತರಬೇತುದಾರೆ ಹಾಗೂ ಕಾರ್ಯಕ್ರಮದ ಸಂಯೋಜಕಿ ವಿದುಷಿ ಉಷಾ ಹೆಬ್ಬಾರ, ರಾಜ್ಯ ಉಪಾಧ್ಯಕ್ಷ ರಾಜೇಂದ್ರಕುಮಾರ್​ ಬಸ್ರೂರು, ಉಡುಪಿ ತಾಲೂಕು ಪ್ರಧಾನ ಕಾರ್ಯದರ್ಶಿ ಶಿವಕುಮಾರ್​ ಅಂಬಲಪಾಡಿ, ವಿದುಷಿ ಪರಿಮಳಾ ವ್ಯಾಸರಾವ್​ ಬಳ್ಳಾರಿ, ಮಠದ ದಿವಾನ ನಾಗರಾಜ ಆಚಾರ್ಯ, ಪ್ರಸನ್ನ ಆಚಾರ್ಯ, ರತೀಶ ತಂತ್ರಿ, ಮಹಿತೋಷ ಆಚಾರ್ಯ, ರಘುಪತಿ ರಾವ್​ ಕಿದಿಯೂರು, ಪ್ರಮುಖರಾದ ನರಸಿಂಹ ನಾಯಕ, ಗಾಯತ್ರಿ ಸುರೇಶ ಮಂಗಳೂರು, ತು.ಸಿ.ಮಾ.ಮ. ಸಂಸ್ಥೆಯ ರವೀಂದ್ರ ಆಚಾರ್ಯ ಹಾಗೂ ವಿವಿಧ ಭಜನಾ ಮಂಡಳಿಗಳ ಸದಸ್ಯರು ಪಾಲ್ಗೊಂಡಿದ್ದರು.

ಪುತ್ತಿಗೆ ಮಠದ ವಿದ್ವಾಂಸ ಡಾ. ಬಿ.ಗೋಪಾಲ ಆಚಾರ್ಯ ಕಾರ್ಯಕ್ರಮ ನಿರೂಪಿಸಿದರು.

ಸಂಕಲ್ಪದೊಂದಿಗೆ ವಿವಿಧ ಪುಷ್ಪಗಳಿಂದ ಪೂಜೆ

Guru 3
ಪ್ರಸ್ತುತ 51ನೇ ಚಾತುರ್ಮಾಸ್ಯ ದೀಕ್ಷೆ ಸ್ವೀಕರಿಸಿದ ಸುಗುಣೇಂದ್ರ ಶ್ರೀಗಳು, ಪಟ್ಟದ ಕಿರಿಯ ಶ್ರೀ ಸುಶ್ರಿಂದ್ರ ತೀರ್ಥ ಶ್ರೀಪಾದರೊಂದಿಗೆ ಎತ್ತರದಲ್ಲಿ ನಿರ್ಮಿಸಿದ, ಸಾಲಂಕಾರದ ಗುರು ವಂದನಾ ಪೀಠದಲ್ಲಿ ಆಸೀನರಾದರು. ಸುಧೀಂದ್ರ ಆಚಾರ್ಯ ಹೆಜಮಾಡಿ ಸಂಕಲ್ಪ ಮಾಡಿಸಿದರು. ಶಿಷ್ಯರು ಶ್ರೀ ಗುರುಭ್ಯೋ ನಮ:, ಪರಮ ಗುರುಭ್ಯೋ ನಮ:, ಶ್ರೀಮದಾನಂದ ತೀರ್ಥ ಭಗವತ್ಪಾದಾಚಾರ್ಯ ಗುರುಭ್ಯೋ ನಮ: ಎಂದು ಪಠಿಸಿ, ಗುರುಗಳಿಬ್ಬರನ್ನೂ ವಿವಿಧ ಪುಷ್ಪಗಳಿಂದ ಪೂಜಿಸಿದರು. ವಾದ್ಯ ಹಾಗೂ ಮಂತ್ರಘೋಷ ಮೊಳಗಿದವು. ವಿವಿಧ ಭಜನೆ, ದಶಾವತಾರದ ಕೀರ್ತನೆಯೊಂದಿಗೆ ಮಹಿಳೆಯರು ಕೋಲಾಟ ನೃತ್ಯ ಪ್ರದರ್ಶಿಸಿದರು.

ಲೌಕಿಕ ಅಥವಾ ಆಧ್ಯಾತ್ಮಿಕ ಸಾಧನೆಗೆ ಗುರುಗಳ ಮಾರ್ಗದರ್ಶನ ಬೇಕೇಬೇಕು. ಭಗವತ್​ ಪ್ರಜ್ಞೆ ಉತ್ತೇಜಿಸುವ ಅಥವಾ ಬೋಧಿಸುವವರೇ ಗುರುಗಳು. ಶ್ರೀಕೃಷ್ಣನು ಅತ್ಯಂತ ಶ್ರೇಷ್ಠನಾದ ಗುರುವಾಗಿದ್ದಾನೆ. ಶಾಲೆಯಷ್ಟೇ ಅಲ್ಲ, ಎಲ್ಲ ಕ್ಷೇತ್ರದಲ್ಲೂ ಗುರುವಿದ್ದಾರೆ. ವಿದ್ಯೆ ಕಲಿಯುವಾಗ ಸಾಧನೆಯ ಗುರಿ ಭಗವಂತನೇ ಆಗಿರಬೇಕು. ಏಕೆಂದರೆ, ನಮ್ಮಿಂದ ಏನೂ ಸಾಧಿಸಲಾಗದು. ಅದಕ್ಕೆ ಭಗವಂತನ ಕೃಪೆ ಬೇಕು ಎನ್ನುವುದನ್ನು ಗುರುವಾದವರು ಶಿಷ್ಯರಿಗೆ ಬೋಧಿಸಬೇಕು. | ಸುಶ್ರೀಂದ್ರ ತೀರ್ಥ ಶ್ರೀಪಾದರು. ಕಿರಿಯ ಶ್ರೀ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net