

ಕೆ.ಆರ್.ಪೇಟೆ: ನಮ್ಮಿಂದ 25 ವರ್ಷಗಳಿಂದ ಹಿಂದೆ ಪಾಠ, ಪ್ರವಚನ ಕಲಿತ ವಿದ್ಯಾರ್ಥಿಗಳು ಇಂದು ಉನ್ನತ ಸ್ಥಾನ-ಮಾನದಲ್ಲಿದ್ದು, ಎಲ್ಲರೂ ಒಂದೆಡೆ ಸೇರಿ ನಮ್ಮನ್ನು ನೆನಪಿಸಿಕೊಂಡು ಗುರುವಂದನೆ ಸಲ್ಲಿಸುತ್ತಿರುವುದು ನಮ್ಮ ವೃತ್ತಿ ಜೀವನದ ಸಾರ್ಥಕ್ಯ ಸೂಚಿಸುತ್ತದೆ ಎಂದು ನಿವೃತ್ತ ಮುಖ್ಯಶಿಕ್ಷಕ ಕೆ.ಮಾದೇಗೌಡ ಸಂತಸ ವ್ಯಕ್ತಪಡಿಸಿದರು.
ತಾಲೂಕಿನ ಹರಿಹರಪುರ ಗ್ರಾಮದ ಸರ್ಕಾರಿ ಪ್ರೌಢಶಾಲೆಯಲ್ಲಿ 1999-2000ನೇ ಸಾಲಿನ ಎಸ್‌ಎಸ್‌ಎಲ್‌ಸಿ ವಿದ್ಯಾಭ್ಯಾಸ ಮಾಡಿರುವ ಹಿರಿಯ ವಿದ್ಯಾರ್ಥಿಗಳು ಹಮ್ಮಿಕೊಂಡಿದ್ದ ಗುರುವಂದನೆ ಹಾಗೂ ಸ್ನೇಹ ಸಮ್ಮಿಲನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಶಿಕ್ಷಕರಾದ ನಾವು ಪಾಠ ಮಾಡುವ ಸಂದರ್ಭದಲ್ಲಿ ಕಲಿಕೆಯ ಮಟ್ಟ ಶ್ರೇಷ್ಠವಾಗಿರಬೇಕು ಎಂದು ವಿದ್ಯಾರ್ಥಿಗಳನ್ನು ದಂಡಿಸಿರುತ್ತೇವೆ. ಅದನ್ನು ವಿದ್ಯಾರ್ಥಿಗಳ ಭವಿಷ್ಯದ ದೃಷ್ಟಿಯಿಂದ ಮಾಡಿರುತ್ತೇವೆ. ದಯಮಾಡಿ ತಾವು ತಪ್ಪು ತಿಳಿದುಕೊಳ್ಳಬಾರದು. ನಮ್ಮ ಪೆಟ್ಟಿನಿಂದ ನೀವು ಚೆನ್ನಾಗಿ ಓದಿ ಉತ್ತಮ ವಿದ್ಯಾರ್ಥಿಗಳಾಗಿ ಉನ್ನತ ಸ್ಥಾನವನ್ನು ಗಿಟ್ಟಿಸಿದ್ದೀರಿ. ಇದು ಶಿಕ್ಷಕರಾದ ನಮಗೆ ಹೆಚ್ಚು ಸಂತೋಷ ಕೊಡುತ್ತದೆ. ಕೆಲವೇ ಕೆಲವು ಮಂದಿ ಮಾತ್ರ ರೈತರಾಗಿದ್ದೀರಿ, ರೈತ ವೃತ್ತಿಯೂ ಅತ್ಯಂತ ಶ್ರೇಷ್ಠವಾದುದು. ನಾನೂ ಸಹ ನಿವೃತ್ತಿಯ ನಂತರ ಭೂಮಿ ಖರೀದಿಸಿ ಬೇಸಾಯದಲ್ಲಿ ತೊಡಗಿಸಿಕೊಂಡಿದ್ದೇನೆ. ಇದರಿಂದ ನಾನೂ ಸಂತೃಪ್ತಿ ಜೀವನ ನಡೆಸುತ್ತಿದ್ದೇನೆ ಎಂದು ಕೆ.ಮಾದೇಗೌಡರು ಹೆಮ್ಮೆಯಿಂದ ಹೇಳಿದರು.
ನಿವೃತ್ತ ಉಪನ್ಯಾಸಕ ಜೈನಹಳ್ಳಿ ಜೆ.ಜಿ.ರಾಜೇಗೌಡ, ಸಾಹಿತಿ, ಶಿಕ್ಷಕ ಬಿ.ಸಿ.ವಿಜಯ್‌ಕುಮಾರ್ ಮಾತನಾಡಿದರು.
ಗೌರವ ಸಮರ್ಪಣೆ: ನಿವೃತ್ತ ಶಿಕ್ಷಕರಾದ ಕೆ.ಮಾದೇಗೌಡರು, ಜೆ.ಜಿ.ರಾಜೇಗೌಡರು, ಎಂ.ಎನ್.ನಾಗೇಶ್, ಕೆ.ಕೆ.ಪುಟ್ಟಣ್ಣಯ್ಯ, ಬಿ.ಎನ್.ಪರಶಿವಮೂರ್ತಿ, ಎಂ.ಎಸ್.ರಾಜಮ್ಮ, ಡಾ.ಬಿ.ಸಿ.ವಿಜಯ್‌ಕುಮಾರ್, ಎಂ.ಎಸ್.ವೆಂಕಟರಾಮು, ಎ.ಬಿ.ಮಹಾದೇವ್, ದಿ.ಬಿ.ಲತಾ ಟೀಚರ್ ಅವರ ಪತಿ ನಿವೃತ್ತ ಸೈನಿಕ ಮಲ್ಲಿಕಾರ್ಜುನಸ್ವಾಮಿ, ಪುತ್ರಿ ನಾರಾಯಣ ಆಸ್ಪತ್ರೆಯ ವೈದ್ಯೆ ಡಾ.ಎಲ್.ಎಂ.ದರ್ಶಿನಿ ಅವರನ್ನು ಸನ್ಮಾನಿಸಲಾಯಿತು.
ವಿದ್ಯಾರ್ಥಿಗಳು ಶಾಲಾ ದಿನಗಳಲ್ಲಿ ತಮಗೆ ವಿದ್ಯೆ ಕಲಿಸಿದ ಗುರುಗಳನ್ನು ಸ್ಮರಿಸಿ, ತಮ್ಮ ಹಳೆಯ ಸ್ನೇಹಿತರನ್ನು ಭೇಟಿ ಮಾಡಿ, ಹಳೆಯ ದಿನಗಳನ್ನು ಮೆಲುಕು ಹಾಕುವ ಮೂಲಕ ಇಡೀ ದಿನ ತಾವು ಓದಿದ ಶಾಲೆಯ ಆವರಣದಲ್ಲಿ ಕಾಲ ಕಳೆದರು.
ಇಲ್ಲಿ ಓದುತ್ತಿರುವ ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಹಿರಿಯ ವಿದ್ಯಾರ್ಥಿಗಳು ಪ್ರೊಜೆಕ್ಟರ್ ಅನ್ನು ಕೊಡುಗೆಯಾಗಿ ನೀಡಿದರು. ಈ ಪ್ರೊಜೆಕ್ಟರ್ ಕೊಠಡಿಯನ್ನು ತಮ್ಮ ಶಿಕ್ಷಕರಿಂದ ಉದ್ಘಾಟಿಸುವ ಮೂಲಕ ಸಂತೋಷ ವ್ಯಕ್ತ ಪಡಿಸಿದರು. ತಮಗೆ ಪ್ರೌಢಶಾಲೆಯಲ್ಲಿ ಪಾಠ ಮಾಡಿದ ಇಂಗ್ಲಿಷ್ ಶಿಕ್ಷಕಿ ಲತಾ ಮತ್ತು ಮೂವರು ಸಹಪಾಠಿಗಳು ಇತ್ತೀಚೆಗೆ ನಿಧನರಾದ ಹಿನ್ನೆಲೆಯಲ್ಲಿ ಸಂತಾಪ ಸೂಚಿಸಲಾಯಿತು.