ವಿದ್ಯೆ ಕಲಿಸಿದ ಗುರುವನ್ನು ಮರೆಯಬೇಡಿ

06 HRS 01
Published on

ಹಿರೀಸಾವೆ : ವಿದ್ಯೆ ಕಲಿಸಿದ ಗುರುವನ್ನು ಮರೆಯದೇ ಅವರಿಗೆ ನಮನ ಸಲ್ಲಿಸುವುದು ಪುಣ್ಯದ ಕಾರ್ಯ ಎಂದು ಬೆಂಗಳೂರು ಗಾಂಧಿ ಪ್ರತಿಷ್ಠಾನದ ಕಾರ್ಯದರ್ಶಿ ಜಿ.ಬಿ. ಶಿವರಾಜು ಹೇಳಿದರು.
ದಿಡಗ ಗ್ರಾಮದ ಸುವರ್ಣ ಭವನದಲ್ಲಿ ಅರುಣೋದಯ ಪ್ರೌಢಶಾಲೆಯ 2000ನೇ ಸಾಲಿನ ವಿದ್ಯಾರ್ಥಿಗಳು ಬುಧವಾರ ಏರ್ಪಡಿಸಿದ್ದ ಗುರುವಂದನಾ ಮತ್ತು ಸ್ನೇಹ ಸಮ್ಮಿಲನ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ರಾಮ ಮತ್ತು ರಾವಣರಲ್ಲಿ ಯಾರು ಶ್ರೇಷ್ಠ ಎಂಬುದು ಮುಖ್ಯ ಅಲ್ಲ. ಅವರಲ್ಲಿರುವ ಮಾನವಿಯ ಮೌಲ್ಯದ ಗುಣಗಳನ್ನು ನಾವು ಅರಿಯಬೇಕು. ಮಕ್ಕಳಿಗೆ ಉತ್ತಮ ಸಂಸ್ಕಾರವನ್ನು ಕಲಿಸಬೇಕು, ಗಾಂಧೀಜಿಯವರ ತತ್ವಗಳನ್ನು ಹೇಳಿಕೊಡಬೇಕು. ಸುಸಂಸ್ಕೃತ ಪರಿಸರವನ್ನು ಉಳಿಸಿದರೆ ಮುಂದಿನ ಪೀಳಿಗೆ ಬದುಕಲು ಸಾಧ್ಯ ಎಂದರು.
ಕ್ಷೇತ್ರ ಶಿಕ್ಷಣಾಧಿಕಾರಿ ದೀಪಾ ಮಾತನಾಡಿ, ವಿದ್ಯೆ ಕಲಿತು ಉತ್ತಮ ಸಾಧನೆ ಮಾಡಿದಾಗ ಪಾಲಕರಂತೆ ಗುರುಗಳೂ ಹೆಮ್ಮೆ ಪಡುತ್ತಾರೆ. ಸಮಾಜದಲ್ಲಿ ಶಿಕ್ಷಕರಿಗೆ ಹೆಚ್ಚು ಗೌರವ ಇದೆ. ಇಂದಿನ ದಿನಗಳಲ್ಲಿ ಮಕ್ಕಳನ್ನು ಸಣ್ಣ-ಸಣ್ಣ ಕಾರಣಗಳಿಗೆ ಜೀವ ಕಳೆದುಕೊಳ್ಳುತ್ತಿದ್ದಾರೆ. ಇದನ್ನು ತಪ್ಪಿಸಲು ಪಾಲಕರು ಧೈರ್ಯದಿಂದ ಬಾಳುವ ನಡೆ ಕಲಿಸಬೇಕು ಎಂದರು.
ಶಾಲೆಯಲ್ಲಿ 2000ನೇ ಸಾಲಿನಲ್ಲಿ ಕರ್ತವ್ಯ ನಿರ್ವಹಿಸಿದ ಶಿಕ್ಷಕರು ಸೇರಿದಂತೆ ಎಲ್ಲ ಗುರುಗಳನ್ನು ಹಾಗೂ ಸಂಸ್ಥೆಯ ಮುಖ್ಯಸ್ಥರಾದ ರಾಮೇಗೌಡ ಮತ್ತು ನಿವೃತ್ತ ಮುಖ್ಯ ಶಿಕ್ಷಕ ಜಯರಾಮ ಅವರನ್ನು ಹಿರಿಯ ವಿದ್ಯಾರ್ಥಿಗಳು ಸನ್ಮಾನಿಸಿದರು.
ಹಳೆಯ ವಿದ್ಯಾರ್ಥಿಗಳಾದ ಶಿವು, ನಾಗೇಶ್, ಜಮಿರ್ ಅಹ್ಮದ್, ಯೋಗೇಶ್, ಜ್ಯೋತಿ, ಶೀಲಾ, ಮಣಿ, ಚಂಪಾ ಇತರರು ಮಾತನಾಡಿದರು. ಸಾಂಸ್ಕೃತಿಕ ಕಾರ್ಯಕ್ರಮ ಗಮನ ಸೆಳೆಯಿತು.
ಅನ್ನಪೂರ್ಣೇಶ್ವರಿ ದೇವಿ ಉಪಾಸಕರಾದ ಕೃಷ್ಣಪ್ಪ, ಗ್ರಾಮದ ಹಿರಿಯರಾದ ಶಿವಣ್ಣ, ಮಾತೃಭೂಮಿ ವೃದ್ಧಾಶ್ರಮದ ನಾಗಣ್ಣ, ಬಿಆರ್‌ಸಿ ಅನಿಲ್, ಪಿಡಿಒ ಪ್ರಕಾಶ್, ಪ್ರಾಂಶುಪಾಲ ಡಿ.ಆರ್.ಮಂಜುನಾಥ್, ಮುಖ್ಯ ಶಿಕ್ಷಕರಾದ ತಿಮ್ಮೇಗೌಡ, ಗ್ರಾಪಂ ಮಾಜಿ ಅಧ್ಯಕ್ಷ ರತ್ನರಾಜು ಇತರರು ವೇದಿಕೆಯಲ್ಲಿ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net