ಬೆಂಗಳೂರಿನಲ್ಲಿ 14ರಿಂದ ಗುರುಸಿದ್ದರಾಮೇಶ್ವರರ ಜಯಂತಿ

IMG_20250102_153140
ಬೆಂಗಳೂರಿನ ತ್ರಿಪುರವಾಸಿನಿ ಅರಮನೆ ಆವರಣದಲ್ಲಿ ಜ.14 ಮತ್ತು 15ರಂದು ಆಯೋಜಿಸಿರುವ ಶ್ರೀ ಗುರುಸಿದ್ದರಾಮೇಶ್ವರ ಸ್ವಾಮಿ 852ನೇ ಜಯಂತಿ ಆಚರಣೆಯ ಬ್ಯಾನರ್ ಬಿಡುಗಡೆ ಮಾಡಲಾಯಿತು. ಕಾಮನಕೆರೆ ಶಶಿಧರ್, ಸಿರಿ ಸಿದ್ದರಾಮೇಗೌಡ, ಕುಭೇರಪ್ಪ, ಮೋಹನ್ ಕುಮಾರ್, ಶಿವಕುಮಾರ್, ಸಂಕೋಡನಹಳ್ಳಿ ಶೇಖರ್, ಸುಮಂತ್ ಇತರರು ಇದ್ದರು.
Published on

ಅರಸೀಕೆರೆ: ಬೆಂಗಳೂರಿನ ತ್ರಿಪುರವಾಸಿನಿ ಅರಮನೆ ಆವರಣದಲ್ಲಿ ಜ.14 ಮತ್ತು 15ರಂದು ಆಯೋಜಿಸಿರುವ ಶ್ರೀ ಗುರುಸಿದ್ದರಾಮೇಶ್ವರ ಸ್ವಾಮಿ 852ನೇ ಜಯಂತಿ ಆಚರಣೆಗೆ ಸಕಲ ಸಿದ್ಧತೆ ಮಾಡಿಕೊಳ್ಳಲಾಗಿದೆ ಎಂದು ನೊಳಂಬ ಲಿಂಗಾಯತ ಕೇಂದ್ರ ಸಮಿತಿ ಗೌರವ ಕಾರ್ಯದರ್ಶಿ ಕಾಮನಕೆರೆ ಶಶಿಧರ್ ಹೇಳಿದರು.

ನಗರದ ಗುರುಸಿದ್ದರಾಮೇಶ್ವರ ಸಮುದಾಯ ಭವನದ ಆವರಣದಲ್ಲಿ ಬ್ಯಾನರ್, ಭಿತ್ತಿಪತ್ರ ಬಿಡುಗಡೆ ಮಾಡಿ ಮಾತನಾಡಿ, ಹನ್ನೆರಡನೇ ಶತಮಾನದ ಶರಣ ಸಿದ್ದರಾಮೇಶ್ವರರ ಮಹಿಮೆಯನ್ನು ನಾಡಿನ ಜನರಿಗೆ ಪರಿಚಯಿಸುವ ನಿಮಿತ್ತ ರಾಜ್ಯದ ಉದ್ದಗಲಕ್ಕೂ ಪ್ರತಿ ವರ್ಷ ಜಯಂತಿ ಆಚರಿಸಿಕೊಂಡು ಬರಲಾಗುತ್ತಿದೆ. ಪ್ರಸಕ್ತ ವರ್ಷದ ಹಬ್ಬ ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಅರ್ಥಪೂರ್ಣವಾಗಿ ನಡೆಸಲು ಎಲ್ಲ ರೀತಿಯ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದೆ. ಈ ಹಿನ್ನೆಲೆಯಲ್ಲಿ ರಾಜ್ಯವ್ಯಾಪಿ ಪ್ರವಾಸ ಮಾಡಿ ಸಂಘಟನೆ ಮೂಲಕ ಸಮುದಾಯದ ಜನರಲ್ಲಿ ಜಾಗೃತಿ ಮೂಡಿಸಲಾಗುತ್ತಿದೆ ಎಂದು ತಿಳಿಸಿದರು.

ಪ್ರಧಾನ ಕಾರ್ಯದರ್ಶಿ ಬೆಟ್ಟದಳ್ಳಿ ರೇಣುಕಾರಾಧ್ಯ ಮಾತನಾಡಿ, ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಸಮಾರಂಭವನ್ನು ಉದ್ಘಾಟಿಸಲಿದ್ದು, ಅರಣ್ಯ ಸಚಿವ ಈಶ್ವರ್ ಖಂಡ್ರೆ ಸ್ಮರಣ ಸಂಚಿಕೆ ಬಿಡುಗಡೆ ಮಾಡುವರು. ಸಾಹಿತ್ಯ ಗೋಷ್ಠಿಯಲ್ಲಿ ಡಿಸಿಎಂ ಡಿ.ಕೆ. ಶಿವಕುಮಾರ್, ಮಾಜಿ ಸಿಎಂ ಬಸವರಾಜ ಬೊಮ್ಮಾಯಿ, ಮಾಜಿ ಶಾಸಕ ಜೆ.ಸಿ.ಮಾಧುಸ್ವಾಮಿ ಸೇರಿದಂತೆ ಹರಗುರು ಚರಮೂರ್ತಿಗಳು, ಚುನಾಯಿತ ಜನಪ್ರತಿನಿಧಿಗಳು ಭಾಗವಹಿಸುವರು ಎಂದರು.

ಜ.15ರಂದು ಬೆಳಗ್ಗೆ 10.30ಕ್ಕೆ ಮಹಿಳಾ ಮತ್ತು ಕೃಷಿ ಗೋಷ್ಠಿ ನಡೆಯಲಿದ್ದು ಕೇಂದ್ರ ಸಚಿವರಾದ ಎಚ್.ಡಿ.ಕುಮಾರಸ್ವಾಮಿ, ಶೋಭಾ ಕರಂದ್ಲಾಜೆ ಹಾಗೂ ಮಾಜಿ ಶಾಸಕ ಕೆ.ಎಸ್.ಲಿಂಗೇಶ್ ಒಳಗೊಂಡಂತೆ ವಿವಿಧ ಮಠಾಧೀಶರು, ವಿವಿಧ ಕ್ಷೇತ್ರಗಳ ಗಣ್ಯರು ಪಾಲ್ಗೊಳ್ಳಲಿದ್ದಾರೆ. ಮಧ್ಯಾಹ್ನ 3 ಗಂಟೆಗೆ ಆಯೋಜಿಸಿರುವ ಸಮಾರೋಪ ಸಮಾರಂಭದಲ್ಲಿ ಸಿಎಂ ಸಿದ್ದರಾಮಯ್ಯ, ಸಚಿವರಾದ ಎಂ.ಬಿ.ಪಾಟೀಲ್, ಭೈರತಿ ಸುರೇಶ್, ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ರಾಷ್ಟ್ರೀಯ ಅಧ್ಯಕ್ಷ ಹಾಗೂ ಶಾಸಕ ಶಾಮನೂರು ಶಿವಶಂಕರಪ್ಪ, ತಿಪಟೂರು ಶಾಸಕ ಷಡಕ್ಷರಿ ಸೇರಿದಂತೆ ನಾಡಿನ ಪ್ರಮುಖ ಮಠಗಳ ಮಠಾಧೀಶರು ಸಾನ್ನಿಧ್ಯ ವಹಿಸುವರು ಎಂದು ವಿವರ ನೀಡಿದರು.

ಸಮಿತಿ ಉಪಾಧ್ಯಕ್ಷ ಸಿರಿ ಸಿದ್ದರಾಮೇಗೌಡ, ಜಂಟಿ ಕಾರ್ಯದರ್ಶಿ ಕುಬೇರಪ್ಪ, ತುಮಕೂರಿನ ಬಳಗದ ಅಧ್ಯಕ್ಷ ಮೋಹನ್ ಕುಮಾರ್, ಉಪ ಸಮಿತಿ ಕಾರ್ಯದರ್ಶಿ ಶಿವಕುಮಾರ್, ನಿರ್ದೇಶಕ ಸಂಕೋಡನಹಳ್ಳಿ ಶೇಖರ್, ವ್ಯವಸ್ಥಾಪಕ ಸುಮಂತ್ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net