

ನರಗುಂದ: ತಾಲೂಕಿನ ಕೊಣ್ಣೂರ ಗ್ರಾಮದ ನಂಜನಗೂಡು ಶ್ರೀರಾಘವೇಂದ್ರ ಸ್ವಾಮಿಗಳ ಮಠದಲ್ಲಿ ಗುರು ಸಾರ್ವಭೌಮ ತೀರ್ಥರ 430ನೇ ವರ್ಧಂತಿ ಮಹೋತ್ಸವ ಗುರುವಾರ ವಿಜೃಂಭಣೆಯಿಂದ ಜರುಗಿತು.
ಮಠದ ವ್ಯವಸ್ಥಾಪಕ ವಾದಿರಾಜ್ ಆಚಾರ್ಯ ಮಾತನಾಡಿ, ಸುಮಾರು ವರ್ಷಗಳ ಹಿಂದೆ ರಾಯರು ಶಿರಸಂಗಿಗೆ ತೆರಳುವಾಗ ಕೊಣ್ಣೂರ ಮಾರ್ಗ ಮಧ್ಯದಲ್ಲಿ ವಿಶ್ರಾಂತಿ ಪಡೆದಿದ್ದರು. ಆಗ ಅವರ ಶಲ್ಯ (ವಸ್ತ್ರ) ಕೊಣ್ಣೂರಿನಲ್ಲಿ ಬಿಟ್ಟು ಹೋಗಿದ್ದರ ಪ್ರತೀಕವಾಗಿ ಕೊಣ್ಣೂರಿನಲ್ಲಿ ಶ್ರೀರಾಘವೇಂದ್ರ ಸ್ವಾಮಿಗಳ ಮಠ ನಿರ್ಮಿಸಲಾಯಿತು ಎಂದರು.
ರಾಯರ ಜನ್ಮದಿನದ ಅಂಗವಾಗಿ ವಿವಿಧ ಪೂಜೆ, ರಥೋತ್ಸವ, ಮಹಾ ಪ್ರಸಾದ ಕಾರ್ಯಕ್ರಮ ನೆರವೇರಿಸಲಾಯಿತು. ರಥೋತ್ಸವದಲ್ಲಿ ರೋಣ, ಬಾದಾಮಿ, ರಾಮದುರ್ಗ, ಗದಗ, ಹುಬ್ಬಳ್ಳಿ, ಧಾರವಾಡ ಮತ್ತಿತರೆಡೆಯಿಂದ ಸಾವಿರಾರು ಭಕ್ತರು ಭಾಗವಹಿಸಿದ್ದರು. ರಾಘವೇಂದ್ರ ಗುಜಮಾಗಡಿ ಭಕ್ತಿ ಸಂಗೀತ ಪ್ರಸ್ತುತಪಡಿಸಿದರು.