ಗುರುರಾಯರ ಆರಾಧನೋತ್ಸವ; ದ್ವಿತೀಯ ಮಂತ್ರಾಲಯ ಉಡುಗಣಿಯಲ್ಲಿ ಸಹಸ್ರಾರು ಭಕ್ತರ ಸಮ್ಮುಖದಲ್ಲಿ ರಥೋತ್ಸವ

2srl1
ಶಿರಾಳಕೊಪ್ಪ ಸಮೀಪದ ಉಡುಗಣಿಯಲ್ಲಿ ಗುರು ರಾಯರ ರಥೋತ್ಸವ ಸಹಸ್ರಾರು ಭಕ್ತರ ಸಮ್ಮುಖದಲ್ಲಿ ನಡೆಯಿತು.
Published on

ಶಿರಾಳಕೊಪ್ಪ: ದ್ವಿತೀಯ ಮೃತ್ತಿಕಾ ಮಂತ್ರಾಲಯವೆಂದು ಪ್ರಸಿದ್ಧವಾಗಿರುವ ಉಡುಗಣಿಯಲ್ಲಿ ಶ್ರೀ ರಾಘವೇಂದ್ರರ 352ನೇ ಆರಾಧನಾ ಮಹೋತ್ಸವ ಅತ್ಯಂತ ವಿಜೃಂಭಣೆಯಿಂದ ನೆರವೇರಿತು. ಮಹೋತ್ಸವದ 3ನೇ ದಿನವಾದ ಶನಿವಾರ ಸಹಸ್ರಾರು ಭಕ್ತರ ಸಮ್ಮುಖದಲ್ಲಿ ಗುರು ರಾಯರ ರಥೋತ್ಸವ ಸಾಂಗವಾಗಿ ನೆರವೇರಿತು.

ಮಧ್ಯಾಹ್ನ 12.30ರ ವೇಳೆಗೆ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ಸಂಸದ ಬಿ.ವೈ.ರಾಘವೇಂದ್ರ ಪೂಜೆ ಸಲ್ಲಿಸುವ ಮೂಲಕ ರಥೋತ್ಸವಕ್ಕೆ ಚಾಲನೆ ನೀಡಿದರು. ಸಹಸ್ರಾರು ಭಕ್ತರ ವೇದಘೋಷಗಳೊಂದಿಗೆ ತೇರನ್ನು ಎಳೆದರು. ಡೊಳ್ಳು ಸೇರಿದಂತೆ ವಿವಿಧ ವಾದ್ಯಗಳು ಭಕ್ತರ ಉತ್ಸಾಹವನ್ನು ಇಮ್ಮಡಿಗೊಳಿಸಿದವು. ಮಹಿಳೆಯರ ಕೋಲಾಟ, ಚಿಕ್ಕ ಮಕ್ಕಳ ಛದ್ಮವೇಷ ರಥೋತ್ಸವದ ರಂಗನ್ನು ಹೆಚ್ಚಿಸಿತ್ತು. ಯುವ ಜನಾಂಗ ಭಜನೆ ಮಾಡುತ್ತಾ ಸಾಗಿದರು. ರಾಯರ ಮಠವನ್ನು ಹೂವು ಮತ್ತು ತಳಿರು ತೋರಣಗಳಿಂದ ವಿಶೇಷವಾಗಿ ಅಲಂಕಾರ ಮಾಡಲಾಗಿತ್ತು.
ರಾಜ್ಯದ ಮೂಲೆ ಮೂಲೆಗಳಿಂದ ಆಗಮಿಸಿದ್ದ ಭಕ್ತರು ತಮ್ಮ ಸೇವೆಗಳನ್ನು ಸಲ್ಲಿಸಿದರು. ಗುರುವಾರ ಪೂರ್ವಾರಾಧನೆಯೊಂದಿಗೆ ಆರಂಭವಾಗಿರುವ ಆರಾಧನಾ ಮಹೋತ್ಸವ ವೇದವ್ಯಾಸರ ಪೂಜೆ ಹಾಗೂ ಪವಮಾನಹೋಮದೊಂದಿಗೆ ಭಾನುವಾರ ಸಂಪನ್ನಗೊಳ್ಳಲಿದೆ. ಸಹಸ್ರಾರು ಭಕ್ತರು ನಿತ್ಯ ನಡೆದ ಅನ್ನಸಂಪರ್ಣೆಯಲ್ಲಿ ಪಾಲ್ಗೊಂಡಿದ್ದರು.
ರಥೋತ್ಸವ ಪ್ರಾರಂಭವಾಗುವ ಮೊದಲು ರಾಯರ ಮಠಕ್ಕೆ ತೆರಳಿ ದಶರ್ನ ಪಡೆದ ಬಿ.ಎಸ್.ಯಡಿಯೂರಪ್ಪ ಮತ್ತು ಬಿ.ವೈ.ರಾಘವೇಂದ್ರ, ಇಲ್ಲಿಯ ವೈಭವವನ್ನು ನೋಡಿದರೆ ಮಂತ್ರಾಲಯದಲ್ಲಿ ಇರುವಂತೆ ಭಾಸವಾಗುತ್ತಿದೆ. ಜಾತಿ, ಧರ್ಮ ಎನ್ನದೇ ಪ್ರತಿಯೊಬ್ಬರೂ ರಾಯರ ಸೇವೆಯಲ್ಲಿ ತೊಡಗಿಸಿಕೊಂಡಿರುವುದನ್ನು ನೋಡಿದರೆ ಸಂತಸ ಉಂಟಾಗುತ್ತಿದೆ ಎಂದು ಹೇಳಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net