

ಸಾಗರ: ಗುರು ಸಾರ್ವಭೌಮರು ಭೌತಿಕ ದೃಷ್ಟಿಗೆ ಅಗೋಚರ ಆಗಿದ್ದರೂ ಭಕ್ತರ ಪಾಲಿಗೆ ಕಾಮಧೇನು. ನಮಿಪರಿಗೆ ಕಲ್ಪವೃಕ್ಷವೆಂದೇ ಪ್ರಚಲಿತರಾಗಿದ್ದಾರೆ. ರಾಯರು ಕಲಿಯುಗದಲ್ಲಿ ತಮ್ಮ ಮಹಿಮೆಯ ಮೂಲಕವೇ ಪ್ರಸಿದ್ಧರಾಗಿದ್ದಾರೆ ಎಂದು ಸಾಗರ ಮಾಧ್ವ ಸಂಘದ ಅಧ್ಯಕ್ಷ ಡಾ. ಗುರುರಾಜ್ ಕಲ್ಲಾಪುರ ಹೇಳಿದರು.
ನಗರದ ಮಾಧ್ವ ಸಂಘದಲ್ಲಿ ಮೂರು ದಿನಗಳ ಕಾಲ ಏರ್ಪಡಿಸಿದ್ದ ಶ್ರೀ ರಾಘವೇಂದ್ರ ಸ್ವಾಮಿಗಳ ಆರಾಧನಾ ಮಹೋತ್ಸವದ ಕೊನೆ ದಿನವಾದ ಶನಿವಾರ ಅನಂತರಾವ ಸೇವಾ ಪುರಸ್ಕಾರ ಪ್ರದಾನ ಮಾಡಿ ಮಾತನಾಡಿ, ಗುರು ಸಾರ್ವಭೌಮರು ಬೇಡಿದವರಿಗೆ ವರಗಳನ್ನು ನೀಡುತ್ತ ಬಂದಿದ್ದಾರೆ. ಗುರುಗಳೆಂದರೆ ಮನಸ್ಸಿಗೆ ಬರುವವರು ಶ್ರೀ ರಾಘವೇಂದ್ರ ಸ್ವಾಮಿಗಳು. ರಾಘವೇಂದ್ರ ಸ್ವಾಮಿಗಳು ವೇಣುಗೋಪಾಲ ಎಂಬ ಅಂಕಿತದಲ್ಲಿ ಗೋವಿಂದನ ದಯೆ ಕೋರಿ ಕೀರ್ತನೆ ರಚಿಸಿದ್ದಾರೆ ಎಂದು ತಿಳಿಸಿದರು.
ಉತ್ತರಾಧಿ ಮಠದ ಸತ್ಯಾತ್ಮ ತೀರ್ಥ ಶ್ರೀಪಾದಂಗಳವರ ದಿವ್ಯಾನುಗ್ರಹದಿಂದ ಮಾಧ್ವ ಸಂಘದ ಆಶ್ರಯದಲ್ಲಿ ಈ ವರ್ಷದಿಂದ ಸಮಾಜದಲ್ಲಿ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸಿದ ಕೆ.ಜಿ.ಅನಂತರಾವ್ ಸ್ಮರಣಾರ್ಥ ಅನಂತ ಸೇವಾ ಪುರಸ್ಕಾರವನ್ನು ನೀಡುತ್ತಿದ್ದೇವೆ. ಈ ವರ್ಷದಿಂದ ಆರಾಧನೆ ಸಂದರ್ಭದಲ್ಲಿ ಬಾಣಸಿಗರು ಮತ್ತು ಪುರೋಹಿತರಿಗೆ ಪ್ರಶಸ್ತಿ ಪ್ರದಾನ ಮಾಡಲಾಗುತ್ತಿದ್ದು ಮೊದಲ ಪುರಸ್ಕಾರವನ್ನು ಆನವಟ್ಟಿಯ ಬಾಣಸಿಗರಾದ ರಾಘವೇಂದ್ರ ಆಚಾರ್ ಅವರಿಗೆ ಪ್ರದಾನ ಮಾಡಿದ್ದೇವೆ ಎಂದು ಹೇಳಿದರು.
ಸಂಘದ ನಿರ್ದೇಶಕ ಆನಂದ ಕಲ್ಯಾಣಿ ಮಾತನಾಡಿ, ನಮ್ಮ ಸಮುದಾಯಗಳನ್ನು ವ್ಯವಸ್ಥಿತವಾಗಿ ಮುನ್ನಡೆಸಿಕೊಂಡು ಹೋಗುತ್ತಿರುವ ಅರ್ಚಕ ಮತ್ತು ಪಾಚಕ ಸೇವೆ ಮಾಡುವವರನ್ನು ಗುರುತಿಸಬೇಕಾದದ್ದು ನಮ್ಮ ಕರ್ತವ್ಯ. ಸಮುದಾಯದ ಸಾಂಪ್ರದಾಯಿಕ ವಿಧಿ ವಿಧಾನಗಳನ್ನು ವ್ಯವಸ್ಥಿತವಾಗಿ ಇವರು ನಡೆಸಿಕೊಂಡು ಬರುತ್ತಿದ್ದಾರೆ. ಇಂದು ಪ್ರಶಸ್ತಿ ಸ್ವೀಕರಿಸಿರುವ ರಾಘವೇಂದ್ರ ಆಚಾರ್ ಕುಟುಂಬದವರು ಕಳೆದ 50 ವರ್ಷಗಳಿಂದ ಬಾಣಸಿಗರಾಗಿ ಸೇವೆ ಮಾಡುತ್ತಿದ್ದು ಇವರ ಸೇವೆ ಗುರುತಿಸಿದ್ದೇವೆ. ಗುರು ರಾಯರ ಸಂಪೂರ್ಣ ಅನುಗ್ರಹ ಅವರಿಗೆ ದೊರೆಯಲಿ ಎಂದು ಆಶಿಸಿದರು.
ಅನಂತ ಸೇವಾ ಪುರಸ್ಕಾರ ಸ್ವೀಕರಿಸಿ ಮಾತನಾಡಿದ ಆನವಟ್ಟಿಯ ಬಾಣಸಿಗ ರಾಘವೇಂದ್ರ ಆಚಾರ್, ನಾನು ಎಂದಿಗೂ ಪುರಸ್ಕಾರ ನೀರಿಕ್ಷಿಸಿದವನಲ್ಲ. ತಂದೆ ರಾಮಾಚಾರ್ ನಡೆಸಿಕೊಂಡು ಬಂದ ಸೇವೆಯನ್ನು ನಾನು ಮುಂದುವರಿಸಿದ್ದೇನೆ. ಬಾಣಸಿಗರನ್ನು ಕೂಡ ಸಮಾಜ ಗುರುತಿಸಿ ಆರಾಧನೆ ಸಂದರ್ಭದಲ್ಲಿ ಗೌರವಿಸಿರುವುದು ನನ್ನ ಜೀವಮಾನದ ಎಂದಿಗೂ ಮರೆಯಲಾಗದ ಅವೀಸ್ಮರಣೀಯ ದಿನ. ಇನ್ನಷ್ಟು ಕೆಲಸ ಮಾಡಲು ಗುರು ರಾಯರಿಂದ ಪ್ರೇರಣೆಗೊಂಡಿದ್ದೇನೆ ಎಂದರು.
ಸಾಗರ ಮಾಧ್ವ ಸಂಘದ ಉಪಾಧ್ಯಕ್ಷ ವೆಂಕಟೇಶಕಟ್ಟಿ, ಪ್ರಧಾನ ಕಾರ್ಯದರ್ಶಿ ಬದ್ರೀಶ್, ಶ್ರೀಶಾಚಾರ್, ಸತ್ಯಶೀಲಾ, ವಿದ್ವಾನ್ ಪಿ.ಎಲ್.ಗಜಾನನ ಭಟ್, ಸಹನಾ ಕಲ್ಯಾಣಿ, ಮಂಜುಳಾ, ವೈ.ಮೋಹನ್, ವೇದವ್ಯಾಸಾಚಾರ್, ರಮಾಮಣಿ ಇತರರಿದ್ದರು. ಮೂರು ದಿನಗಳ ಕಾಲ ನಡೆದ ಆರಾಧನ ಮಹೋತ್ಸವದಲ್ಲಿ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನಡೆದವು.