

ಹುಬ್ಬಳ್ಳಿ: ನಗರದ ಜೆಎಸ್ಎಸ್ ಶ್ರೀ ಮಂಜುನಾಥೇಶ್ವರ ಸೆಂಟ್ರಲ್ ಸ್ಕೂಲ್ ನಲ್ಲಿ ಶನಿವಾರ ಗುರು ಪೂರ್ಣಿಮೆ ನಿಮಿತ್ತ ವಿಶೇಷ ಕಾರ್ಯಕ್ರಮಗಳನ್ನು ಆಯೋಜಿಸಲಾಗಿತ್ತು.
10ನೇ ತರಗತಿಯ ವಿದ್ಯಾರ್ಥಿಗಳು ತಮ್ಮ ತಂದೆ- ತಾಯಿಗಳಿಗೆ ಪಾದಪೂಜೆ ನೆರವೇರಿಸಿದರು.
ಶಿಕ್ಷಕ ನಾಗರಾಜ ಜೋಶಿ ಅವರು ಮಾತನಾಡಿ, ತಂದೆ- ತಾಯಿಯರ ಮಹತ್ವ ಹಾಗೂ ಅವರನ್ನು ಪೂಜ್ಯನೀಯ ಭಾವನೆಯಿಂದ ಹೇಗೆ ನೋಡಿಕೊಳ್ಳಬೇಕೆಂಬುದರ ಬಗ್ಗೆ ತಿಳಿಸಿಕೊಟ್ಟರು.
ಅಧ್ಯಕ್ಷತೆ ವಹಿಸಿದ್ದ ಶಾಲೆಯ ಮುಖ್ಯೋಪಾಧ್ಯಾಯ ರಜನಿ ಪಾಟೀಲ್ ಅವರು, ಆಧುನಿಕ ಜೀವನದ ಭರಾಟೆಯಲ್ಲಿ ಸನಾತನ ಸಂಸ್ಕೃತಿಯನ್ನು ಯಾವ ರೀತಿ ನಾವು ಮುಂದುವರಿಸಿಕೊಂಡು ಹೋಗಬೇಕು ಎಂಬುದನ್ನು ತಿಳಿಸಿದರು.
ಸಂಸ್ಕೃತಿಯನ್ನು ಮರೆತರೆ ಸಮಾಜ ತೊಂದರೆಯನ್ನು ಅನುಭವಿಸುತ್ತದೆ. ಮನೆಯೇ ಮೊದಲ ಪಾಠಶಾಲೆಯಾಗಿದ್ದು, ತಂದೆ- ತಾಯಿ ಮೊದಲ ಗುರುಗಳು. ಮನೆಯಿಂದಲೇ ಮಕ್ಕಳ ಪಾಠ ಪ್ರಾರಂಭವಾಗುತ್ತದೆ. ಇಲ್ಲಿ ಪಡೆದ ಅಕ್ಷರದ ಅಭ್ಯಾಸ ಜೀವನದ ಎಲ್ಲ ಮೆಟ್ಟಿಲುಗಳಿಗೂ ಸಹಕಾರಿಯಾಗುತ್ತದೆ ಎಂದು ಹೇಳಿದರು.
ಮಾರ್ಕಂಡೇಶ್ವರ ನಾಟಕ, ಹಲವು ನೃತ್ಯ ಮತ್ತು ಹಾಡುಗಳನ್ನು ಪ್ರಸ್ತುತ ಪಡಿಸಲಾಯಿತು. ಅನ್ವಿತ್ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು. ಅನನ್ಯ ಮತ್ತು ಅಮೂಲ್ಯ ಪಿ. ಪ್ರಾಸ್ತಾವಿಕ ಮಾತನಾಡಿದರು. ವಿಹಾನ್ ವಂದಿಸಿದರು.