

ರಾಯಚೂರು ಶಿರಿಡಿ ಸಾಯಿಬಾಬ ಸೇವಾ ಚಾರಿಟೇಬಲ್ ಟ್ರಸ್ಟ್ ಹಾಗೂ ಓಂ ಸಾಯಿ ಧ್ಯಾನಮಂದಿರದ ವತಿಯಿಂದ ಜು.10 ರಂದು ನಗರದ ಓಂ ಸಾಯಿ ಧ್ಯಾನಮಂದಿರದಲ್ಲಿ ಗುರು ಪೂರ್ಣಿಮಾ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆಂದು ಮಂದಿರದ ಸಂಸ್ಥಾಪಕ ಸಾಯಿಕಿರಣ ಆದೋನಿ ಹೇಳಿದರು.
ನಗರದ ಪತ್ರಿಕಾ ಭವನದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಅಂದು ಬೆಳಿಗ್ಗೆ 6ಗಂಟೆಗೆ ಕಾಕಡಾರತಿ, 6.30ಕ್ಕೆ ಮಹಾರುದ್ರಾಭಿಷೇಕ, 7.30ಕ್ಕೆ ಪುಷ್ಪಾಭಿಷೇಕ, ಹಾಗೂ 8.30ಕ್ಕೆ ಸಾಯಿ ಸತ್ಯನಾರಾಯಣ ಪೂಜೆಯನ್ನು ಹಮ್ಮಿಕೊಳ್ಳಲಾಗಿದೆ.
ಈ ಬಾರಿ ಗುರುಪೂರ್ಣಿಮಾ ವಿಶೇಷವಾಗಿ ಗುರುವಾರ ಬಂದಿದ್ದು, ಶನಿಮಹಾರಾಜರ ಪ್ರತಿಷ್ಠಾಪನೆಯ ಮಹಾಯಜ್ಞಕ್ಕಾಗಿ ಉಜ್ಜನಿಯಿಂದ ವಿಶೇಷವಾಗಿ ಶುದ್ಧೀಕರಿಸಿ ಪೂಜಿಸಲ್ಪಟ್ಟು ತರಿಸಲಾದ 8000 ಪವಿತ್ರ ರುದ್ರಾಕ್ಷಗಳನ್ನು ಗುರುಪೂರ್ಣಿಮಾ ಕಾರ್ಯಕ್ರಮದಂದು ವಿತರಿಸಲಾಗುವುದು ಎಂದರು.
ಮಧ್ಯಾಹ್ನ 12.15ಕ್ಕೆ ಸಾಯಿಬಾಬಗೆ ವಿಶೇಷ ಮಂಗಳಾರತಿಯನ್ನು ನೆರವೇರಿಸಲಾಗುವುದು. 1 ಗಂಟೆಗೆ 5000 ಭಕ್ತರಿಗೆ ಅನ್ನದಾಸೋಹ ಜರುಗಲಿದೆ. ಸಂಜೆ 6.15ಕ್ಕೆ ಧೂಪಾರತಿ, ನಂತರ ಪಲ್ಲಕ್ಕಿ ಸೇವೆ, ರಾತ್ರಿ 9.30ಕ್ಕೆ ಶೇಜ್ ಆರತಿ ಕಾರ್ಯಕ್ರಮ ಜರುಗಲಿದೆ.
ಕಾರ್ಯಕ್ರಮಕ್ಕೆ ಸಚಿವರು, ಶಾಸಕರು, ಸಂಸದರು, ವಿಧಾನಸಭಾ ಸದಸ್ಯರು, ಸೇರಿದಂತೆ ಎಲ್ಲಾ ಜನಪ್ರತಿನಿಧಿಗಳನ್ನು ಆಹ್ವಾನಿಸಲಾಗಿದೆ. ಗುರು ಪೂರ್ಣಿಮಾ ದಿನದಂದು ಜರುಗಲಿರುವ ಎಲ್ಲಾ ಕಾರ್ಯಕ್ರಮದಲ್ಲಿ ಭಕ್ತರು ಭಾಗವಹಿಸುವಂತೆ ಮನವಿ ಮಾಡಿದರು. ಈ ಸಂದರ್ಭದಲ್ಲಿ ಪ್ರವೀಣ ಪ್ರಭುಶೆಟ್ಟರ್, ಈರಣ್ಣ ಮಡಿವಾಳ, ಜಿ.ಕೇಶವಮೂರ್ತಿ, ಅನ್ವರ್ ಹುಸೇನ್, ತಾನಾಜಿ, ಅವಿರಾಜ್ ಇದ್ದರು.