ಅಂಬೇಡ್ಕರ್, ಬುದ್ಧನ ಮಾರ್ಗದಲ್ಲಿ ಸಾಗೋಣ: ಮಳವಳ್ಳಿ ಶಾಸಕ ಪಿ.ಎಂ.ನರೇಂದ್ರಸ್ವಾಮಿ ಕರೆ

Guru Purnima Mandya
Published on

ಮಂಡ್ಯ: ಗೌತಮ ಬುದ್ಧ ಮತ್ತು ಡಾ.ಬಿ.ಆರ್.ಅಂಬೇಡ್ಕರ್ ಹೇಳಿಕೊಟ್ಟ ಮಾರ್ಗದಲ್ಲಿ ಸಾಗಿದಾಗ ಮಾತ್ರ ನಮ್ಮ ಉದ್ದಾರ ಸಾಧ್ಯ ಎಂದು ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿ ಅಧ್ಯಕ್ಷ ಹಾಗೂ ಮಳವಳ್ಳಿ ಶಾಸಕ ಪಿ.ಎಂ.ನರೇಂದ್ರಸ್ವಾಮಿ ಹೇಳಿದರು.

ನಗರದ ಕರ್ನಾಟಕ ಸಂಘದ ಕೆ.ವಿ.ಶಂಕರಗೌಡ ಶತಮಾನೋತ್ಸವ ಭವನದಲ್ಲಿ ವಿಶ್ವಜ್ಞಾನಿ ಸೇವಾ ಟ್ರಸ್ಟ್ ಮತ್ತು ಕೆಎಸ್‌ಆರ್‌ಟಿಸಿ ಎಸ್ಸಿ, ಎಸ್ಟಿ ನೌಕರರ ಸಂಘದ ಸಹಯೋಗದಲ್ಲಿ ಗುರು ಪೂರ್ಣಿಮೆ ಅಂಗವಾಗಿ ಆಯೋಜಿಸಿದ್ದ ಸಾರ್ವಜನಿಕರಿಗೆ ಗೌತಮ ಬುದ್ಧರ ಸಂದೇಶ ತಿಳಿಸುವ ಒಂದು ದಿನದ ಕಾರ್ಯಾಗಾರದಲ್ಲಿ ಮಾತನಾಡಿದ ಅವರು, ಸಮಾಜವನ್ನು ಜಾಗೃತಿಗೊಳಿಸುತ್ತಿರುವ ವಿಶ್ವಜ್ಞಾನಿ ಸೇವಾ ಟ್ರಸ್ಟ್ ಕೆಲಸ ಪ್ರಶಂಸನೀಯ. ನೌಕರರು ತಮ್ಮ ಸೇವಾ ಅವಧಿಯಲ್ಲಿ ಇರುವಾಗಲೇ ತಮ್ಮ ಸಮುದಾಯದ ಬಡವರಿಗೆ ಸಹಾಯ ಮಾಡುವುದರ ಮೂಲಕ ಅಂಬೇಡ್ಕರ್ ಅವರ ಕನಸುಗಳನ್ನು ಸಾಕಾರಗೊಳಿಸಲು ಮುಂದಾಗಬೇಕು ಎಂದು ಸಲಹೆ ನೀಡಿದರು.

ಅಕ್ಕ ಐ.ಎ.ಎಸ್ ಅಕಾಡೆಮಿ ಸಂಸ್ಥಾಪಕ ಡಾ.ಶಿವಕುಮಾರ ಮಾತನಾಡಿ, ನಮ್ಮ ಜೀವನಶೈಲಿಗಳನ್ನು ಮತೊಬ್ಬರನ್ನು ಮೆಚ್ಚಿಸುವುದಕ್ಕಾಗಿ ಬದಲಾಯಿಸಿಕೊಳ್ಳಬಾರದು. ಬದಲಾಗಿ ನೈಜ ಬದುಕಿನ ಸತ್ಯದ ಮಾರ್ಗದಲ್ಲಿ ಹಾಗೂ ವಿಶ್ವಕ್ಕೆ ಶಾಂತಿಯ ಸಂದೇಶವನ್ನು ಸಾರಿದ, ಸರಳವಾದ ಪಂಚಶೀಲ ಹೇಳಿಕೊಟ್ಟ ಗೌತಮ ಬುದ್ಧರು ದಾರಿಯಲ್ಲಿ ನಾವುಗಳು ನಮ್ಮ ಮುಂದಿನ ಬದುಕನ್ನು ಕಟ್ಟಿಕೊಳ್ಳಬೇಕು. ಇಲ್ಲದಿದ್ದರೆ ಯುವಜನತೆ ಪ್ರತಿನಿತ್ಯ ದುಶ್ಚಟಕ್ಕಾಗಿ ಹಿಂಸೆಯ ಮಾರ್ಗದಲ್ಲಿ ಸಾಗಿ ಜೀವನವನ್ನು ಹಾಳು ಮಾಡಿಕೊಳ್ಳುತ್ತಾರೆ ಎಂದು ಆತಂಕ ವ್ಯಕ್ತಪಡಿಸಿದರು.

ವಿಶ್ವಜ್ಞಾನಿ ಸೇವಾ ಟ್ರಸ್ಟ್‌ನ ತಾಳಶಾಸನ ಮೋಹನ್, ಸಮಾಜ ಕಲ್ಯಾಣ ಇಲಾಖೆ ಉಪ ನಿರ್ದೇಶಕ ಶ್ರೀನಿವಾಸ್, ಅಂಬೇಡ್ಕರ್ ವಿಚಾರವಾದಿ ಪ್ರೊ.ಕಲಾವತಿ, ನಗರಸಭೆ ಮಾಜಿ ಅಧ್ಯಕ್ಷೆ ವಿಜಯಲಕ್ಷ್ಮೀ ರಘುನಂದನ್, ದಸಂಸ ರಾಜ್ಯ ಮುಖಂಡರಾದ ಶ್ರೀನಿವಾಸ್, ನಂಜುಂಡ ಮೌರ್ಯ, ಕೆಎಸ್‌ಆರ್‌ಟಿಸಿ ಅಧಿಕಾರಿಗಳಾದ ನಾಗರಾಜು, ಶೇಷವಮೂರ್ತಿ, ಎಚ್.ಡಿ.ಮೋಹನ್, ಬಾಲರಾಜು, ಶಿವರಾಮು, ನವೀನ್, ಶಂಕರಪ್ಪ, ರಾಜು, ಜವರಪ್ಪ, ರವಿ, ಮಹೇಶ್, ಮಹದೇವಮ್ಮ, ಮಲ್ಲಿಕಾರ್ಜುನ್, ಅಶ್ವಥ್, ಜಗದೀಶ್, ಶಿವರಾಮೇಗೌಡ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net