

ಮಂಡ್ಯ: ಜಿಲ್ಲಾದ್ಯಂತ ಗುರುಪೂರ್ಣಿಮೆಯನ್ನು ಆಚರಣೆ ಮಾಡಲಾಯಿತು.
ತಾಲೂಕಿನ ಬಿ.ಗೌಡಗೆರೆ ಸಮೀಪದ ಶಿರಡಿ ಸಾಯಿಬಾಬ ಮಂದಿರದಲ್ಲಿ ಶಾಸಕ ರವಿಕುಮಾರ್ ಗಣಿಗ ವಿಶೇಷ ಪೂಜೆ ಸಲ್ಲಿಸಿದರು. ಗುರುಪೂರ್ಣಿಮೆ ಅಂಗವಾಗಿ ಮಂದಿರದಲ್ಲಿ ಜಾತ್ರಾ ಮಹೋತ್ಸವ ಹಾಗೂ ಧುನಿ ಪೂಜೆ ಆಯೋಜಿಸಲಾಗಿತ್ತು. ಹಬ್ಬದ ಸಂಭ್ರಮದಲ್ಲಿ ಪಾಲ್ಗೊಂಡ ರವಿಕುಮಾರ್ ಗಣಿಗ ಶಿರಡಿ ಸಾಯಿಬಾಬಗೆ ಪ್ರಾರ್ಥನೆ ಸಲ್ಲಿಸಿದರು. ಶಿರಡಿ ಸಾಯಿಬಾಬ ಮಂದಿರದ ಸಾಯಿ ಭಾಸ್ಕರ್, ವಿಜಯ್, ಜೆ.ಶ್ರೀಕಾಂತ್, ಹನಕೆರೆ ಚೇತು, ಧನಂಜಯ ಇತರರಿದ್ದರು.
ಮಕ್ಕಳಿಗೆ ಅಕ್ಷರಾಭ್ಯಾಸ: ನಗರದ ಮಂಡ್ಯ ಎಜುಕೇಷನ್ ಸೊಸೈಟಿ ಶಾಲೆಯಲ್ಲಿ ಗುರುಪೂರ್ಣಿಮಾ ಅಂಗವಾಗಿ ಮಕ್ಕಳಿಗೆ ಅಕ್ಷರಾಭ್ಯಾಸ ಕಾರ್ಯಕ್ರಮ ನಡೆಯಿತು. ಸಮಾರಂಭಕ್ಕೆ ಚಾಲನೆ ನೀಡಿ ಮಾತನಾಡಿದ ಪತ್ರಕರ್ತ ಶ್ರೀಪಾದು, ಅಕ್ಷರಾಭ್ಯಾಸ ಮಾಡಲು ಯಾವುದೇ ಜಾತಿ ಬೇಧವಿರುವುದಿಲ್ಲ. ಎಲ್ಲ ಜಾತಿಯಲ್ಲಿಯೂ ಮಹನೀಯರು ಜನಿಸಿದ್ದಾರೆ. ಮಕ್ಕಳು ತಾಯಿ, ತಂದೆಗೆ ಮೊದಲು ಗೌರವ ನೀಡುವ ಕೆಲಸವನ್ನು ಮಾಡಬೇಕು ಎಂದು ಸಲಹೆ ನೀಡಿದರು.
ಅಕ್ಷರಾಭ್ಯಾಸವು ಮಗುವಿಗೆ ಅಕ್ಷರ ಕಲಿಸುವ ಸಾಂಪ್ರದಾಯಿಕ ಹಬ್ಬವಾಗಿದೆ. ಹಿಂದಿನಿಂದಲೂ ಈ ಸಂಸ್ಕೃತಿ ನಡೆದು ಬಂದಿದೆ. ಮಗುವಿಗೆ ಅಕ್ಷರ ಕಲಿಸುವ ಮುನ್ನಾ ತಂದೆ ತಾಯಂದಿರು ತಮಗಿಷ್ಟವಾದ ದೇವಾಲಯದಲ್ಲಿ ಅಥವಾ ಶಾಲೆಗಳಲ್ಲಿ ಅಕ್ಷರಾಭ್ಯಾಸದಂತಹ ಕಾರ್ಯಕ್ರಮ ಆಯೋಜಿಸಿ ಮಕ್ಕಳ ಕಲಿಕೆಗೆ ಪ್ರೋತ್ಸಾಹಿಸುತ್ತಾರೆ ಎಂದು ಅಭಿಪ್ರಾಯಪಟ್ಟರು.
ಮಂಡ್ಯ ಎಜುಕೇಷನ್ ಟ್ರಸ್ಟ್ ಮಾಜಿ ಅಧ್ಯಕ್ಷ ಎಂ.ವಿ.ಧರಣೇಂದ್ರಯ್ಯ ಮಾತನಾಡಿ, ಕನ್ನಡ ಭಾಷೆಗೆ ಹೆಚ್ಚು ಒತ್ತು ನೀಡುವುದು ಮುಖ್ಯವಾಗಬೇಕು. ಕನ್ನಡವನ್ನು ಉಳಿಸಿ ಬೆಳೆಸುವ ಕೆಲಸ ಮಾಡಬೇಕು. ಆಂಗ್ಲ ಸೇರಿದಂತೆ ಇತರೆ ಭಾಷೆಯ ಜ್ಞಾನವು ಮಕ್ಕಳಿಗೆ ಇರಲಿ. ಆದರೆ ಕನ್ನಡ ಭಾಷೆಗೆ ಮೊದಲ ಪ್ರಾಧಾನ್ಯತೆ ನೀಡಬೇಕು. ಶಿಕ್ಷಣದ ಆರಂಭವು ಮಗುವಿಗೆ ಒಂದು ಮೈಲಿಗಲ್ಲಾಗಿದೆ ಎಂದು ತಿಳಿಸಿದರು.
ಟ್ರಸ್ಟ್ ಅಧ್ಯಕ್ಷ ಜಿ.ಕೆ.ಗುಂಡೂರಾವ್, ನಿರ್ದೇಶಕರಾದ ರಘುನಂದನ್, ಸತ್ಯನಾರಾಯಣ್‌ರಾವ್, ವೆಂಕಟೇಶ್, ಮುಖ್ಯಶಿಕ್ಷಕಿ ಅನಿತಾ ಇತರರಿದ್ದರು. ಇದೇ ಸಂದರ್ಭದಲ್ಲಿ ಮಕ್ಕಳಿಗೆ ಪಾಲಕರೊಂದಿಗೆ ಅಕ್ಷರಾಭ್ಯಾಸ ಮಾಡಿಸಲಾಯಿತು.
ಇದಲ್ಲದೆ ನಗರದ ಹೊಂಬಾಳೆ ಎಜುಕೇಷನ್ ಚಾರಿಟಬಲ್ ಟ್ರಸ್ಟ್ ವತಿಯಿಂದ ನಡೆದ ಗುರುಪೂರ್ಣಿಮಾ ಕಾರ್ಯಕ್ರಮದಲ್ಲಿ ಮಕ್ಕಳಿಗೆ ಅಕ್ಷರಾಭ್ಯಾಸ ನಡೆಸಲಾಯಿತು. ಟ್ರಸ್ಟ್‌ನ ಅಧ್ಯಕ್ಷ ಬಸವರಾಜು ಮಾತನಾಡಿ, ಹಿಂದು ಧಾರ್ಮಿಕ ಸಂಸ್ಕೃತಿಯಲ್ಲಿ ಮಕ್ಕಳಿಗೆ ಅಕ್ಷರಾಭ್ಯಾಸ ಮಾಡಿಸುವುದು ಒಂದು ಶುಭಾರಂಭ. ನಮ್ಮ ಶಾಲೆಯಲ್ಲಿ ಮಕ್ಕಳಿಗೆ ಅಕ್ಷರಾಭ್ಯಾಸ ಮಾಡಿಸುವ ಕಾರ್ಯಕ್ರಮ ಆಯೋಜಿಸಿರುವುದು ಸಂತಸ ತಂದಿದೆ. ಮಕ್ಕಳು ಮತ್ತು ಅವರ ತಂದೆ ತಾಯಂದಿರು ಅಕ್ಷರಾಭ್ಯಾಸ ಮಾಡಿಸಿದ್ದು ಎಲ್ಲರಿಗೂ ಮೆಚ್ಚುಗೆ ಆಗಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು. ಟ್ರಸ್ಟ್‌ನ ಜಯಲಕ್ಷ್ಮೀ ಸಿದ್ದೇಗೌಡ, ಗುರುಪ್ರಸಾದ್, ಡಾ.ಮಂಜುನಾಥ್, ಶಿಕ್ಷಕರಾದ ಕವಿತಾ, ವಿಜಯಲಕ್ಷ್ಮೀ, ಪ್ರತಿಭಾ ಇತರರಿದ್ದರು. ನಗರದ ಸತ್ಯಸಾಯಿ ಸೇವಾ ಕ್ಷೇತ್ರದಲ್ಲಿ ಗುರುಪೂರ್ಣಿಮೆಯನ್ನು ಆಚರಣೆ ಮಾಡಲಾಯಿತು.
ಹಳುವಾಡಿಯಲ್ಲಿ ಗುರುಗಳಿಗೆ ಪುಷ್ಪ ನಮನ
ತಾಲೂಕಿನ ಹಳುವಾಡಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಪಾಠಶಾಲೆಯಲ್ಲಿ ಗುರುಪೂರ್ಣಿಮೆಯನ್ನು ವಿಶೇಷ ಆಚರಣೆ ಮಾಡಲಾಯಿತು. ವಿದ್ಯಾರ್ಥಿಗಳು ಮತ್ತು ಎಸ್‌ಡಿಎಂಸಿ ಸದಸ್ಯರೆಲ್ಲರೂ ಸೇರಿ ಗ್ರಾಮದ ಸರ್ಕಾರಿ ಶಾಲೆಯಲ್ಲಿ ಸೇವೆ ಸಲ್ಲಿಸುತ್ತಿರುವ ಶಿಕ್ಷಕ ಹಾಗೂ ಶಿಕ್ಷಕಿಯರಿಗೆ ಪುಷ್ಪಗಳಿಂದ ನಮನ ಸಲ್ಲಿಸಿದರು. ಗುರುವಿನ ಪಾದಗಳಿಗೆ ವಿದ್ಯಾರ್ಥಿಗಳು ಹೂಗಳನ್ನು ಹಾಕಿ ನಮಸ್ಕರಿಸುತ್ತ ಆಶೀರ್ವಾದ ಪಡೆದರು.
ಈ ಸಂದರ್ಭದಲ್ಲಿ ಮಾತನಾಡಿದ ಮುಖ್ಯಶಿಕ್ಷಕಿ ಕಮಲಮ್ಮ, ’ಒಂದಕ್ಷರ ಕಲಿಸಿದಾತಂ ಗುರು’ ಎಂಬಂತೆ ಜೀವನದುದ್ದಕ್ಕೂ ಕಲಿಯೋಣ ಮತ್ತು ಕಲಿಸೋಣ. ಗುರು ಎಂಬ ಪದಕ್ಕೆ ವಿಶೇಷವಾಗಿ ಅರ್ಥೈಸಿದರೆ ಅಂಧಕಾರವನ್ನು ಹೋಗಲಾಡಿಸುವವರು. ಗುರುಗಳು ನಿರಂತರವಾಗಿ ಪ್ರಭಾವವನ್ನು ಬೀರುತ್ತಲೇ ಇರುತ್ತಾರೆ ಎಂದರು.
ಶಿಕ್ಷಕರಾದ ಭಾಗ್ಯಮ್ಮ, ದೀಪಾಂಜಲಿ, ವಿದ್ಯಾ, ಎಸ್‌ಡಿಎಂಸಿ ವೆಂಕಟೇಶ್, ರೂಹಿ ಬಾನು, ಶಿವಪ್ರಸಾದ್ ಇತರರಿದ್ದರು.