

ವಿಜಯವಾಣಿ ಸುದ್ದಿಜಾಲ ಬೆಳ್ತಂಗಡಿ
ನಾರಾಯಣಗುರುಗಳು ಜಗತ್ತು ಕಂಡ ಶ್ರೇಷ್ಠ ದಾರ್ಶನಿಕ ಸಂತರು. ಅವರು ಬದುಕಿನುದ್ದಕ್ಕೂ ನಾವು ಬೆಳೆಸಿಕೊಳ್ಳಬೇಕಾದ ಅದ್ಭುತ ವಿಚಾರಧಾರೆ ನೀಡಿದ್ದಾರೆ. ನಾವು ಅದನ್ನು ಪಾಲಿಸುವುದೇ ಅವರಿಗೆ ಮಾಡುವ ಪೂಜೆ ಪ್ರಸಾದವಾಗಿದೆ ಎಂದು ಚಲನಚಿತ್ರ ನಿರ್ದೇಶಕ ಸ್ಮಿತೇಶ್ ಎಸ್.ಬಾರ್ಯ ಹೇಳಿದರು.
ಶಿರ್ಲಾಲು ಬ್ರಹ್ಮ ಬೈದೆರ್ಕಳ ಗರಡಿ ವಠಾರದಲ್ಲಿ ಬ್ರಹ್ಮಶ್ರೀ ಗುರು ನಾರಾಯಣ ಸ್ವಾಮಿ ಸೇವಾ ಸಂಘ ನೇತೃತ್ವದಲ್ಲಿ ಯುವ ಬಿಲ್ಲವ ವೇದಿಕೆ, ಮಹಿಳಾ ಬಿಲ್ಲವ ವೇದಿಕೆ, ಯುವವಾಹಿನಿ ಸಂಚಲನ ಸಮಿತಿ ಸಹಕಾರದಲ್ಲಿ ಬ್ರಹ್ಮಶ್ರೀ ನಾರಾಯಣಗುರುಗಳ 171ನೇ ಗುರು ಜಯಂತಿ ಪ್ರಯುಕ್ತ ಗ್ರಾಮ ಸಮಿತಿಯಿಂದ ಭಾನುವಾರ 27ನೇ ವರ್ಷದ ಗುರುಪೂಜೆ ಕಾರ್ಯಕ್ರಮದ ಧಾರ್ಮಿಕ ಸಭೆಯಲ್ಲಿ ಗುರು ಸಂದೇಶ ನೀಡಿದರು.
ಬೆಳ್ತಂಗಡಿ ಶ್ರೀ ಗುರು ನಾರಾಯಣ ಸ್ವಾಮಿ ಸೇವಾ ಸಂಘದ ಪ್ರಧಾನ ಕಾರ್ಯದರ್ಶಿ ನಿತೀಶ್ ಎಚ್.ಕುಕ್ಕೇಡಿ, ಬೆಳ್ತಂಗಡಿ ಯುವವಾಹಿನಿ ಘಟಕದ ಅಧ್ಯಕ್ಷ ಗುರುರಾಜ್ ಗುರಿಪಲ್ಲ, ಬ್ರಹ್ಮಬೈದರ್ಕಳ ಗರಡಿ ಆಡಳಿತ ಸಮಿತಿ ಗೌರವಾಧ್ಯಕ್ಷ ರಮಾನಂದ ಗುಡ್ಡಾಜೆ, ತಾಲೂಕು ಯುವ ಬಿಲ್ಲವ ವೇದಿಕೆ ಅಧ್ಯಕ್ಷ ಎಂ.ಕೆ.ಪ್ರಸಾದ್ ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದರು.
ಬ್ರಹ್ಮಶ್ರೀ ಗುರು ನಾರಾಯಣ ಸ್ವಾಮಿ ಸೇವಾ ಸಂಘದ ಅಧ್ಯಕ್ಷ ಸದಾಶಿವ ಪೂಜಾರಿ ಅಧ್ಯಕ್ಷತೆ ವಹಿಸಿದ್ದರು. ಯುವ ಬಿಲ್ಲವ ವೇದಿಕೆ ಅಧ್ಯಕ್ಷ ಜ್ಞಾನೇಶ್ ಕುಮಾರ್ ಕಟ್ಟ, ಮಹಿಳಾ ಬಿಲ್ಲವ ವೇದಿಕೆ ಅಧ್ಯಕ್ಷೆ ಶೋಭಾ ಶುಭಕರ ಹೇಡ್ಯದಡ್ಡ, ಯುವವಾಹಿನಿ ಸಂಚಲನ ಸಮಿತಿ ಅಧ್ಯಕ್ಷ ಯತೀಶ್ ಪೂಜಾರಿ ಮೊದಲಾದವರಿದ್ದರು.
ಯುವ ಬಿಲ್ಲವ ವೇದಿಕೆ ಕೋಶಾಧಿಕಾರಿ ರಂಜಿತ್ ಅಜಿರೋಲಿ ಸ್ವಾಗತಿಸಿದರು. ದಿನೇಶ್ ಕರ್ದೊಟ್ಟು ಸಂಘದ ವಾರ್ಷಿಕ ವರದಿ, ನಿಕಟ ಪೂರ್ವಾಧ್ಯಕ್ಷ ಪ್ರವೀಣ್ ಪಾಲನೆ ಸನ್ಮಾನ ಪತ್ರ ವಾಚಿಸಿದರು. ಉಪಾಧ್ಯಕ್ಷ ಹರೀಶ್ ಕಲ್ಲಾಜೆ ನಿರೂಪಿಸಿದರು. ಯುವವಾಹಿನಿ ಸಂಚಲನ ಸಮಿತಿ ಮಾಜಿ ಅಧ್ಯಕ್ಷ ಪ್ರಕಾಶ್ ಕಟ್ರಬೈಲು ವಂದಿಸಿದರು.
ಸಾಧಕರಿಗೆ ಗೌರವಾರ್ಪಣೆ
ಎಸ್ಸೆಸ್ಸೆಲ್ಸಿ ಸಾಧಕಿ ವಿಪೇಕ್ಷಿತಾ ಹಾಗೂ ದ್ವಿತೀಯ ಪಿಯುಸಿ ಸಾಧಕಿ ಅಕ್ಷರಾ ಅವರನ್ನು ದತ್ತಿನಿಧಿ ನೀಡಿ ಸನ್ಮಾನಿಸಲಾಯಿತು. ಶಿರ್ಲಾಲು ಸಿ.ಎ. ಬ್ಯಾಂಕ್ ನಿರ್ದೇಶಕರಾಗಿ ಆಯ್ಕೆಯಾದ ಸಮಾಜ ಬಾಂಧವರನ್ನು, ಸ್ಯಾಕ್ಷೋಫೋನ್ ವಾದನ ನಡೆಸಿಕೊಟ್ಟ ಪ್ರತಿಕ್ಷಾ ಮತ್ತು ಪ್ರಣೀತಾ ಅವರನ್ನು ಗೌರವಿಸಲಾಯಿತು. ನಿರಂಜನ ಶಾಂತಿ ಮತ್ತು ತಂಡದವರ ಪೌರೋಹಿತ್ಯದಲ್ಲಿ ಗುರುಪೂಜೆ ನಡೆಯಿತು.
ಅನೇಕ ಸಾಮಾಜಿಕ ಚಟುವಟಿಕೆಯ ಮೂಲಕ ತಾಲೂಕಿಗೆ ಹೆಸರು ತರುವ ಕೆಲಸವನ್ನು ಶಿರ್ಲಾಲಿನ ಬಿಲ್ಲವ ಸಂಘಟನೆಗಳು ಮಾಡುತ್ತಾ ಬಂದಿದೆ. ಸಮಾಜದ ಕಟ್ಟ ಕಡೆಯ ವ್ಯಕ್ತಿಗೂ ಸ್ವಾಭಿಮಾನದ ಬದುಕು ಕೊಡುವ ಕೆಲಸ ಸಂಘಟನೆ ಮೂಲಕ ನಿತ್ಯ ನಿರಂತರವಾಗಿ ನಡೆಯಲಿ. ನಿತೀಶ್ ಎಚ್.ಕುಕ್ಕೇಡಿ, ಬೆಳ್ತಂಗಡಿ ಶ್ರೀ ಗುರು ನಾರಾಯಣ ಸ್ವಾಮಿ ಸೇವಾ ಸಂಘದ ಪ್ರಧಾನ ಕಾರ್ಯದರ್ಶಿ