

ಚನ್ನರಾಯಪಟ್ಟಣ: ತಾಲೂಕಿನ ಹಿರೀಸಾವೆ ಹೋಬಳಿಯ ಚಿಕ್ಕೋನಹಳ್ಳಿ ಗೇಟ್ ಬಳಿಯಿರುವ ಸಾಯಿಸದ್ಗುರು ಆಶ್ರಮದಲ್ಲಿ ಜು.10ರಂದು ಗುರುಪೂರ್ಣಿಮೆ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದು ಸಾಯಿ ಸದ್ಗುರು ಆಶ್ರಮದ ಮುಖ್ಯಸ್ಥ ಗುರುಮೂರ್ತಿ ಗುರೂಜಿ ಹೇಳಿದರು.
ಗುರುಪೂರ್ಣಿಮಾ ಪ್ರಯುಕ್ತ ಅಂದು ಬೆಳಗ್ಗೆ 8ಕ್ಕೆ ಗಂಗಾಪೂಣೆ, ವ್ಯಾಸಪೂಣೆ, ನಂದಿಧ್ವಜಾರೋಹಣ, ಸದ್ಗುರುಪೂಜೆ, ಕುಂಭಾಭಿಷೇಕ, ಭಜನೆ ಸೇರಿದಂತೆ ಧಾರ್ಮಿಕ ಕಾರ್ಯಕ್ರಮ ಆಯೋಜಿಸಲಾಗಿದೆ. ಅಂದು ಬೆಳಗ್ಗೆಯಿಂದ ಸಂಜೆವರೆಗೆ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿದೆ. ದರ್ಶನಕ್ಕೆ ಆಗಮಿಸುವ ಭಕ್ತರಿಗೆ ಮಧ್ಯಾಹ್ನ ಪ್ರಸಾದದ ವ್ಯವಸ್ಥೆ ಇದೆ. ಅದೇ ದಿನ ಸಹಜ ಕ್ರಿಯಾಯೋಗ ಪುಸ್ತಕವನ್ನು ಬಿಡುಗಡೆ ಮಾಡಲಾಗುವುದು. ಆಶ್ರಮದಲ್ಲಿ ಕಲ್ಯಾಣ ಮಂಟಪ ನಿರ್ಮಾಣ ಹಂತದಲ್ಲಿದ್ದು, ಚಿಕ್ಕೋನಹಳ್ಳಿ, ಹಿರೀಸಾವೆ ಸುತ್ತಲಿನ ಜನರ ಆರೋಗ್ಯದ ದೃಷ್ಟಿಯಿಂದ ಮುಂಬರುವ ದಿನಗಳಲ್ಲಿ ಆಶ್ರಮದಲ್ಲಿ ಆಸ್ಪತ್ರೆ ನಿರ್ಮಿಸುವ ಉದ್ದೇಶ ಹೊಂದಲಾಗಿದೆ. ಸಾಯಿಆಶ್ರಮದ ನೆರವಿನ ಜತೆಗೆ ಸರ್ಕಾರೇತರ ಸಂಸ್ಥೆಗಳು ಮತ್ತು ದಾನಿಗಳ ಸಹಕಾರ ಪಡೆಯಲಾಗುವುದು ಎಂದು ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಬೆಂಗಳೂರು ನಗರದಲ್ಲಿ ಶಿವಶಕ್ತಿ ಶಿರಡಿ ಸಾಯಿಬಾಬಾ ಮಂದಿರ ಇದ್ದು, ಅಲ್ಲಿ ಗೋಶಾಲೆ ಆರಂಭಿಸಲಾಗಿದೆ. ಹೊಳೆನರಸೀಪುರ ತಾಲೂಕು ಉಲವಾಲ ಗ್ರಾಮದ ಬಳಿ ಸಾಯಿಮಂದಿರ ನಿರ್ಮಿಸಲಾಗುವುದು. ಅರಕಲಗೂಡು ತಾಲೂಕಿನ ರಾಮನಾಥಪುರದಲ್ಲಿ ಸಾಯಿ ಮಂದಿರ ಮಂಟಪದ ಕಾಮಗಾರಿ ಪ್ರಗತಿಯಲ್ಲಿದೆ. ಮಂಡ್ಯ ಜಿಲ್ಲೆ ಶ್ರಿರಂಗಪಟ್ಟಣದ ಬಳಿ ಕೆ. ಶೆಟ್ಟಿಹಳ್ಳಿಯಲ್ಲಿ ಮಂದಿರ ನಿರ್ಮಾಣಕ್ಕೆ ಭೂಮಿಪೂಜೆ ನೆರವೇರಿಸಲಾಗಿದೆ. ಚಿತ್ರದುರ್ಗದ ಬಳಿ ಸಾಯಿದತ್ತಾಶ್ರಮದ ಕಟ್ಟಡ ಕಾಮಗಾರಿ ಶೇ.95 ರಷ್ಟು ಪೂರ್ಣಗೊಂಡಿದೆ. ಆದಷ್ಟು ಬೇಗ ಕಾಮಗಾರಿ ಪೂರ್ಣಗೊಳಿಸಿ ಲೋಕಾರ್ಪಣೆಗೆ ದಿನಾಂಕ ನಿಗದಿಮಾಡಲಾಗುವುದು ಎಂದು ತಿಳಿಸಿದರು.
ಸಾಯಿಸದ್ಗುರು ಆಶ್ರಮದ ಶಿವಾನಂದ್ ಸುದ್ದಿಗೋಷ್ಠಿಯಲ್ಲಿದ್ದರು.