ಕಲಿಕಾಸಕ್ತಿ ಹೆಚ್ಚಿಸುವಲ್ಲಿ ಗುರುವಿನ ಪಾತ್ರ ದೊಡ್ಡದು

05 hkr 02 SANMAN
Published on

ಹಿರೇಕೆರೂರ: ಬೋಧನಾ ವೃತ್ತಿ ಅತ್ಯಂತ ಶ್ರೇಷ್ಠ ವೃತ್ತಿಗಳಲ್ಲಿ ಒಂದು ಎಂಬುದನ್ನು ಪರಿಗಣಿಸಿರುವ ದೇಶ ನಮ್ಮದು. ಮಕ್ಕಳಿಗೆ ಅಕ್ಷರಾಭ್ಯಾಸ ಮಾಡಿಸುವ ಜತೆಗೆ ಸರಿ ತಪ್ಪುಗಳನ್ನು ತಿದ್ದುವ, ಅವರಲ್ಲಿನ ಆಸಕ್ತಿಗಳನ್ನು ವೃದ್ಧಿಸುವ ಮತ್ತು ಅವರ ಬದುಕಿಗೆ ಗುರಿ ರೂಪಿಸುವುದರಲ್ಲಿ ಶಿಕ್ಷಕರ ಪಾತ್ರ ಮಹತ್ವದ್ದು ಎಂದು ಸಿಇಎಸ್ ವಿದ್ಯಾಸಂಸ್ಥೆಯ ಸಂಸ್ಥೆಯ ಗೌರವ ಕಾರ್ಯದರ್ಶಿ ಎಸ್.ಎಸ್. ಪಾಟೀಲ ಹೇಳಿದರು.

ಪಟ್ಟಣದ ಸಿಇಎಸ್ ವಿದ್ಯಾಸಂಸ್ಥೆಯ ವಿವಿಧ ಶಾಲಾ-ಕಾಲೇಜುಗಳ ಆಶ್ರಯದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ಶಿಕ್ಷಕರ ದಿನಾಚರಣೆ ಹಾಗೂ ಉತ್ತಮ ಶಿಕ್ಷಕರಿಗೆ ಸನ್ಮಾನ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು. ಮಕ್ಕಳೂ ಶಿಕ್ಷಕರಿಗೆ ವಿವಿಧ ರೀತಿಯಲ್ಲಿ ಗೌರವ ಅರ್ಪಿಸುತ್ತಾರೆ. ಆದರೆ, ಈ ಬಾರಿ ಶಾಲೆಗಳಲ್ಲಿ ಶಿಕ್ಷಕರ ದಿನಾಚರಣೆ ಸಾಧ್ಯವಾಗುತ್ತಿಲ್ಲ. ಆನ್​ಲೈನ್ ಮೂಲಕ ತರಗತಿಗಳನ್ನು ನಡೆಸುತ್ತಿರುವ ಶಿಕ್ಷಕರಿಗೆ ತಮ್ಮ ದಿನವನ್ನು ಸಂಭ್ರಮಿಸುವ ಅವಕಾಶವೂ ಸಿಗುತ್ತಿಲ್ಲ ಎಂದು ವಿಷಾದ ವ್ಯಕ್ತಪಡಿಸಿದರು.

ಅಧ್ಯಕ್ಷತೆ ವಹಿಸಿದ್ದ ಸಂಸ್ಥೆಯ ಅಧ್ಯಕ್ಷ ಎಸ್.ಬಿ. ತಿಪ್ಪಣ್ಣನವರ ಮಾತನಾಡಿ, ದೇಶದ ಭವಿಷ್ಯ ಮಕ್ಕಳ ಕೈಯಲ್ಲಿದೆ. ಇಂದಿನ ಮಕ್ಕಳೇ ಮುಂದಿನ ಪ್ರಜೆಗಳು ಎಂಬ ಘೊಷ ವಾಕ್ಯಗಳನ್ನು ಕೇಳಿರುತ್ತೇವೆ. ಅಂತಹ ಭವಿಷ್ಯದ ಪ್ರಜೆಗಳನ್ನು ಸಿದ್ಧಪಡಿಸುವ ಹಾಗೂ ಅವರಿಗೆ ಸೂಕ್ತ ಮಾರ್ಗದರ್ಶನ ನೀಡುವ ಹೊಣೆ ಶಿಕ್ಷಕರ ಮೇಲಿರುತ್ತದೆ ಎಂದರು.

ಆಡಳಿತಾಧಿಕಾರಿ ಎಸ್. ವೀರಭದ್ರಯ್ಯ ಪ್ರಾಸ್ತಾವಿಕವಾಗಿ ಮಾತನಾಡಿದರು. ಸಂಸ್ಥೆಯ 7 ಜನ ಶಿಕ್ಷಕರಿಗೆ ಉತ್ತಮ ಶಿಕ್ಷಕ ಪ್ರಶಸ್ತಿ ನೀಡಿ ಸನ್ಮಾನಿಸಲಾಯಿತು. ಸಂಸ್ಥೆಯ ಉಪಾಧ್ಯಕ್ಷರಾದ ಎಂ.ವಿ.ಹೊಂಬರಡಿ, ಏಕೇಶಣ್ಣ ಬಣಕಾರ, ಪ್ರಾಂಶುಪಾಲ ಕೆ.ಆರ್. ಲಮಾಣಿ, ಬಿ.ಪಿ. ಹಳ್ಳೇರ, ಮುಖ್ಯಶಿಕ್ಷಕರಾದ ಕೆ.ಎನ್. ಸುಕುಕುಮಾರ, ಆರ್.ಎಚ್.ಪೂಜಾರ, ಬಿ.ವಿ. ಸನ್ನೇರ, ಸತೀಶ ಬಣಕಾರ, ಹಿರಿಯ ಉಪನ್ಯಾಸಕರಾದ ಕೆ.ಎಚ್. ಮಾವಿನತೋಪ, ನಾಗರತ್ನ ಮುದಕನಗೌಡ್ರ, ಎಸ್.ಸಿ. ಬಸರಿಹಳ್ಳಿ, ಇತರರಿದ್ದರು.

ಪ್ರಾಚಾರ್ಯ ಡಾ.ಎಸ್.ಬಿ. ಚನ್ನಗೌಡರ, ದೈಹಿಕ ಶಿಕ್ಷಣ ಶಿಕ್ಷಕ ರಾಜು ಕರೇಗೌಡ್ರ ಕಾರ್ಯಕ್ರಮ ನಿರ್ವಹಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net