ಸರ್ವಜನಾಂಗದ ಶಾಂತಿಯ ತೋಟ ಗುರು ಮಠ

GTL DHARMA SABHE
Published on

ಗುತ್ತಲ: ಸಮೀಪದ ನೆಗಳೂರಿನ ಶ್ರೀ ಗುರುಶಾಂತೇಶ್ವರ ಸಂಸ್ಥಾನ ಹಿರೇಮಠ ಕೇವಲ ವೀರಶೈವ ಲಿಂಗಾಯತರಿಗೆ ಮಾತ್ರ ಸೀಮಿತವಾಗದೆ ಸರ್ವ ಜನಾಂಗಕ್ಕೂ ಗುರು ಮಠವಾಗಿ ಸರ್ವಜನಾಂಗದ ಶಾಂತಿಯ ತೋಟವಾಗಿದೆ ಎಂದು ನೆಗಳೂರ ಸಂಸ್ಥಾನ ಹಿರೇಮಠದ ಗುರುಶಾಂತೇಶ್ವರ ಶಿವಾಚಾರ್ಯ ಸ್ವಾಮೀಜಿ ಹೇಳಿದರು.

ಸಮೀಪದ ನೆಗಳೂರ ಗ್ರಾಮದ ಸಂಸ್ಥಾನ ಹಿರೇಮಠದಲ್ಲಿ ಬುಧವಾರ ಆಯೋಜಿಸಿದ್ದ ಜಾತ್ರಾಮಹೋತ್ಸವ ಸಮಾರೋಪದ ಸಾನ್ನಿಧ್ಯ ವಹಿಸಿ ಅವರು ಆಶೀರ್ವಚನ ನೀಡಿದರು. ನೆಗಳೂರಿನ ಶ್ರೀ ಮಠ ಸುಮಾರು 36 ಗ್ರಾಮಗಳಿಗೆ ಗುರುಮಠವಾಗಿದೆ. ಮಠಕ್ಕೆ ಯಾವುದೇ ಆಸ್ತಿಯಿಲ್ಲ. ಭಕ್ತರೇ ದೊಡ್ಡ ಆಸ್ತಿಯಾಗಿದ್ದಾರೆ ಎಂದರು.

ಪಂಚಪೀಠ ಪರಂಪರೆಯ ಮಠಗಳು ಯಾವುದೇ ಜಾತಿ, ಜನಾಂಗ, ಪಕ್ಷ, ಪಂಗಡಗಳಿಗೆ ಸೀಮಿತವಾಗಿರದೇ ಸರ್ವ ಮನುಕುಲಕ್ಕೆ ಧರ್ಮ ಸಂಸ್ಕಾರ ಪಸರಿಸುವ ಶ್ರದ್ಧಾ ಕೇಂದ್ರಗಳಾಗಿವೆ. ಆ ಹಿನ್ನೆಲೆಯಲ್ಲಿ ನೆಗಳೂರಿನ ಸಂಸ್ಥಾನ ಹಿರೇಮಠ ಯಾವ ಕಾಲಕ್ಕೂ ಮಠದಲ್ಲಿ ಜಾತಿ ಹಾಗೂ ರಾಜಕೀಯ ಪ್ರವೇಶ ಮಾಡಲು ಬಿಡುವುದಿಲ್ಲ, ರಕ್ತ ಸಂಬಂಧಗಳಿಗಿಂತ ಭಕ್ತ ಸಂಬಂಧವೇ ಮೇಲು ಎಂಬ ತತ್ವದಡಿ ಶ್ರೀಮಠವು ಕಾರ್ಯ ಮಾಡುತ್ತಿದೆ ಎಂದರು.

ಶ್ರೀಮಠದ ಧಾರ್ವಿುಕ ಪಾಠಶಾಲೆಯ ಅಂತಿಮ ವರ್ಷದ ವಿದ್ಯಾರ್ಥಿಗಳಿಗೆ ಪ್ರಮಾಣಪತ್ರ ನೀಡಲಾಯಿತು. ಜಾತ್ರಾ ಸೇವಾ ಸಮಿತಿ ಪದಾಧಿಕಾರಿಗಳು ಹಾಗೂ ಸೇವಾಕರ್ತರಿಗೆ ಶ್ರೀಗಳು ಆಶೀರ್ವದಿಸಿದರು.

ಶೇಖರಯ್ಯ ಶಾಸ್ತ್ರೀ ಹಿರೇಮಠ, ಏಸು ಕ್ರಿಸ್ತ ಹಾಗೂ ಸಂತ ಶರೀಫರ ಕುರಿತು ಪ್ರವಚನ ನೀಡಿದರು. ಹನುಮಂತಕುಮಾರ ಮೇಟಿ ಸಂಗೀತಕ್ಕೆ ಮೌನೇಶ ಬಡಿಗೇರ ತಬಲಾ ಸಾಥ್ ನೀಡಿದರು.

ಜಾತ್ರಾಮಹೋತ್ಸವ ಸೇವಾ ಸಮಿತಿ ಅಧ್ಯಕ್ಷ ರೇವಣೆಪ್ಪ ಕಿವುಡಿ, ಉಪಾಧ್ಯಕ್ಷ ಕುರುವತ್ತೆಪ್ಪ ದಡ್ಡಿ, ಸದಸ್ಯರಾದ ಕನಕರೆಡ್ಡಿ ಆನ್ವೇರಿ, ಶಿವಯೋಗೆಪ್ಪ ಹುಂಬಿ, ವೀರನಗೌಡ ಮಲ್ಲಾಗೌಡ್ರ, ಹನುಮರೆಡ್ಡಿ ಛಪ್ಪರದ, ಮುಕ್ತರಹ್ಮದ್ ಮುಲ್ಲಾ, ಫಕೀರೇಶ ಶಿಡ್ಲಣ್ಣನವರ, ಫಕೀರೇಶ ಕಂಬಳಿ, ಮಾಲತೇಶ ಭರಸಣ್ಣನವರ, ನಿಂಗಪ್ಪ ಹುಲೆಪ್ಪನವರ, ಸಣ್ಣಪ್ಪ ಗುಡಗೂರ, ಗಂಗಾಧರ ಕಟ್ಟೆಣ್ಣನವರ, ಪರಮೇಶ್ವರಯ್ಯ ಮಠಪತಿ, ವೀರುಪಾಕ್ಷಪ್ಪ ಹೆಡಿಯಾಲ, ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net