

ಚಿಕ್ಕಮಗಳೂರು: ವಿದ್ಯಾರ್ಥಿಗಳನ್ನು ಅಜ್ಞಾನದಿಂದ ಜ್ಞಾನದ ಕಡೆಗೆ ಕೊಂಡೊಯ್ಯವ ಜವಾಬ್ದಾರಿ ಶಿಕ್ಷಕರ ಮೇಲಿದೆ. ತಮ್ಮ ಸೇವಾ ಅವಧಿಯಲ್ಲಿ ಎಸ್.ಆರ್.ವೈದ್ಯ ಮತ್ತು ಪ್ರೊ. ಜಗದೀಶಪ್ಪ ಅವರ ಕರ್ತವ್ಯ ನಿರ್ವಹಣೆ ಇತರರಿಗೆ ಮಾದರಿಯಾಗಿದೆ. ಇಂಥ ಶಿಕ್ಷಕರನ್ನು ಸನ್ಮಾನಿಸುತ್ತಿರುವುದು ಶ್ಲಾಘನೀಯ ಎಂದು ಲಯನ್ಸ್ ಕ್ಲಬ್ ನಿಕಟಪೂರ್ವ ಅಧ್ಯಕ್ಷ ಜಿ.ರಮೇಶ್ ತಿಳಿಸಿದರು.
ನಗರದ ಲಯನ್ಸ್ ಭವನದಲ್ಲಿ ಶಿಕ್ಷಕರ ದಿನಾಚರಣೆ ಅಂಗವಾಗಿ ಲಯನ್ಸ್ ಸಂಸ್ಥೆಯ ಹಿರಿಯರೂ ಆದ ನಿವೃತ್ತ ಶಿಕ್ಷಕರಾದ ಎಸ್.ಆರ್.ವೈದ್ಯ, ಪ್ರೊ. ಜಗದೀಶಪ್ಪ ಅವರಿಗೆ ಸನ್ಮಾನ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಒಬ್ಬ ಉತ್ತಮ ಗುರುವಿನಿಂದ ಇಡೀ ಸಮಾಜವನ್ನೇ ತಿದ್ದಲು ಸಾಧ್ಯ ಎಂದು ಹೇಳಿದರು.
ಸನ್ಮಾನ ಸ್ವೀಕರಿಸಿದ ನಿವೃತ್ತ ಪ್ರಾಚಾರ್ಯ ಎಸ್.ಆರ್.ವೈದ್ಯ ಮಾತನಾಡಿ, ವಿದ್ಯಾರ್ಥಿಗಳ ಬದುಕಿನಲ್ಲಿ ಶಿಕ್ಷಣ ಒಂದು ಮಹತ್ತರ ಘಟ್ಟವಾಗಿದೆ. ಈ ಹಂತದಲ್ಲಿ ವಿದ್ಯಾರ್ಥಿಗಳು ಸಂಸ್ಕಾರದ ಶಿಕ್ಷಣ ಪಡೆದು ಹೊರಬಂದು ಸಮಾಜಕ್ಕೆ ದೊಡ್ಡ ಆಸ್ತಿಯಾಗಬೇಕು. ಬದಲಾದ ಪರಿಸ್ಥಿತಿಯಲ್ಲಿ ಶಿಕ್ಷಣದ ಜೊತೆಗೆ ಉತ್ತಮ ಸಂಸ್ಕಾರ ನೀಡಬೇಕಾದ ಶಿಕ್ಷಣ ಸಂಸ್ಥೆಗಳು ಇಂದು ವ್ಯಾಪಾರಿ ಸಂಸ್ಥೆಗಳಾಗಿ ಬೆಳೆಯುತ್ತಿರುವುದು ಅತ್ಯಂತ ಆತಂಕಕಾರಿ ಸಂಗತಿ ಎಂದು ವಿಷಾದ ವ್ಯಕ್ತಪಡಿಸಿದರು.
ನಿವೃತ್ತ ಉಪನ್ಯಾಸಕ ಪ್ರೊ. ಜಗದೀಶಪ್ಪ ಮಾತನಾಡಿ, ಭಾರತೀಯ ಪರಂಪರೆಯಲ್ಲಿ ಶಿಕ್ಷಕರಿಗೆ ಅತ್ಯಂತ ಗೌರವದ ಸ್ಥಾನವಿದೆ. ಶಿಕ್ಷಣದ ಜೊತೆಗೆ ಉತ್ತಮವಾದ ಸಂಸ್ಕಾರವನ್ನು ನೀಡುವ ಕೆಲಸವನ್ನು ಶಿಕ್ಷಣ ಸಂಸ್ಥೆಗಳು ಮಾಡಬೇಕಾಗಿದೆ ಎಂದು ತಿಳಿಸಿದರು.
ಲಯನ್ಸ್ ಕ್ಲಬ್ ಅಧ್ಯಕ್ಷ ಕೆ. ಪುಷ್ಪರಾಜ್ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿ, ಲಯನ್ಸ್ ಕ್ಲಬ್‌ನ ಹಿರಿಯ ಸದಸ್ಯರಾದ ಎಸ್.ಆರ್.ವೈದ್ಯ ಮತ್ತು ಪ್ರೊ.ಜಗದೀಶಪ್ಪ ಅವರು ಲಯನ್ಸ್ ಸಂಸ್ಥೆಗೆ ಆಧಾರಸ್ತಂಭಗಳಾಗಿದ್ದಾರೆ. ಇಂತಹ ಪ್ರತಿಭಾನ್ವಿತ ಶಿಕ್ಷಕರನ್ನು ಈ ಶಿಕ್ಷಕರ ದಿನಾಚರಣೆಯ ಸಂದರ್ಭದಲ್ಲಿ ಗೌರವಿಸುತ್ತಿರುವುದು ಅತ್ಯಂತ ಹೆಮ್ಮೆಯ ಸಂಗತಿ ಎಂದು ಹೇಳಿದರು.
ಲಯನ್ಸ್ ಕ್ಲಬ್ ಕಾರ್ಯದರ್ಶಿ ಗೋಪಿಕೃಷ್ಣ, ವಲಯಾಧ್ಯಕ್ಷ ಬಿ.ಎನ್.ವೆಂಕಟೇಶ್, ನಿಕಟಪೂರ್ವ ಕಾರ್ಯದರ್ಶಿ ಟಿ.ನಾರಾಯಣಸ್ವಾಮಿ, ಉಪಾಧ್ಯಕ್ಷ ಸಿ.ಎನ್.ಕುಮಾರ್, ನಿಕಟಪೂರ್ವ ಖಜಾಂಚಿ ಬಾಲಕೃಷ್ಣ, ಲಯನ್ಸ್ ಕ್ಲಬ್‌ನ ಹಿರಿಯ ಸದಸ್ಯರಾದ ಎಂ.ಆರ್. ನಾಗರಾಜ್, ಎಂ.ಆರ್.ಕೇಶವಮೂರ್ತಿ, ಲಯನ್ಸ್ ಸೇವಾ ಟ್ರಸ್ಟ್ನ ಅಧ್ಯಕ್ಷ ಶಶಿಪ್ರಸಾದ್, ಲಯನ್ಸ್ ಕ್ಲಬ್ ಖಜಾಂಚಿ ಎಂ.ಎA. ಗಿರೀಶ್ ಮತ್ತಿತರರಿದ್ದರು.