

ಹಿರೇಕೆರೂರ: ಆಧ್ಯಾತ್ಮಿಕವಾಗಿ ಮಾನವನನ್ನು ಮಹಾದೇವನನ್ನಾಗಿ ಮಾಡಲು ಶ್ರಮಿಸುವವನೇ ನಿಜವಾದ ಗುರು ಎಂದು ತಿಪ್ಪಾಯಿಕೊಪ್ಪ ಗುರು ಮೂಕಪ್ಪ ಶಿವಯೋಗಿಗಳ ಮಠದ ಮಹಾಂತ ಸ್ವಾಮೀಜಿ ಹೇಳಿದರು.
ಪಟ್ಟಣದ ವಿಠ್ಠಲ ನಗರದ ಸಾಯಿ ಬಾಬಾ ಮಂದಿರದಲ್ಲಿ ಸಾಯಿಬಾಬಾ ಸೇವಾ ಅಭಿವೃದ್ಧಿ ಟ್ರಸ್ಟ್ ವತಿಯಿಂದ ಸೋಮವಾರ ಏರ್ಪಡಿಸಿದ್ದ ಗುರುಪೂರ್ಣಿಮಾ ಉತ್ಸವಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು. ಗುರುವಿನ ಗುಲಾಮನಾಗುವ ತನಕ ಸಿಗುವುದಿಲ್ಲ ಮೋಕ್ಷ ಎಂಬಂತೆ, ಅವನನ್ನು ಸದಾಕಾಲ ಸ್ಮರಿಸಿ ಆರಾಧಿಸುವ ಮೂಲಕ ತೃಪ್ತಿ ಪಡಿಸಬೇಕು. ಮನುಷ್ಯನ ರೂಪದಲ್ಲಿ ಯಾವುದೇ ಶಸ್ತ್ರ ಹಿಡಿಯದೆ ಸಮಾಜದ ಅಂಕು ಡೊಂಕು ತಿದ್ದುವನೇ ನಿಜವಾದ ಗುರುವಾಗಿದ್ದಾನೆ. ಎಲ್ಲ ಧರ್ಮದ ಮುಖ್ಯ ಉದ್ದೇಶ ಒಂದೆ. ಆರಾಧನೆ ಅಷ್ಟೆ ಬೇರೆಯಾಗಿದೆ. ಬರಿ ಆಸ್ತಿಯಿಂದ ಗುರು-ಶಿಷ್ಯರ ಸಂಬಂಧವಾಗಬಾರದು ಎಂದರು.
ಧರ್ಮದರ್ಶಿ ಶಿವಾಜಿರಾವ್ ಮಧೂರಕರ, ಪಪಂ ಮಾಜಿ ಅಧ್ಯಕ್ಷ ಕಂಠಾಧರ ಅಂಗಡಿ, ಮಂಜುನಾಥ ತಂಬಾಕದ, ಉದ್ಯಮಿ ಬ್ರಿಜ್‌ಮೋಹನ್ ಭೂಥಡಾ ಮಾತನಾಡಿದರು. ಇದಕ್ಕೂ ಮುನ್ನ ಸಾಯಿಬಾಬಾರವರಿಗೆ ವಿಶೇಷ ಪೂಜೆ ನೆರವೇರಿಸಲಾಯಿತು. ಶಿವಾಜಿರಾವ್ ಮಧೂರಕರ ದಂಪತಿಗಳಿಂದ ಪೂಜ್ಯರಿಗೆ ಪಾದಪೂಜೆ, ಸಾಯಿಬಾರವರಿಗೆ ಮಹಾಮಂಗಳಾರತಿ, ದುರ್ಗಾದೇವಿ ಮಹಿಳಾ ಸತ್ಸಂಗದ ವತಿಯಿಂದ ವಿಷ್ಣು ಸಹಸ್ರನಾಮ ಮತ್ತು ಲಲಿತ ಸಹಸ್ರನಾಮ, ನಂತರ ಅನ್ನಸಂತರ್ಪಣೆ ನಡೆಯಿತು.
ಪಪಂ ಸದಸ್ಯರಾದ ಮಹೇಂದ್ರ ಬಡಳ್ಳಿ, ಶಂಶಾದಬೀ ಕುಪ್ಪೇಲೂರ, ಮಾರುತಿ ಮಧೂರಕರ, ರಾಜು ತಿಪ್ಪಶೆಟ್ಟಿ, ಗೀತಾ ಕೊತ್ವಾಲ, ಪರಿಮಳಾ ಶಿರಗಂಬಿ, ಕವಿತಾ ಕಲ್ಯಾಣಿ, ರತ್ನಮ್ಮಾ ಜಾಡರ, ಪಾಂಡುರಂಗ ಪಾರ್ಸಿ, ಗುಡ್ಡದಯ್ಯ ಭೀಮಸೆ ಇತರರು ಇದ್ದರು.
ಪ್ರಕಾಶ ಶಿರಗಂಬಿ, ಚಂದ್ರು ಮಧೂರಕರ ನಿರ್ವಹಿಸಿದರು.