

ವಿಜಯಪುರ : ಗುರುವೆಂದರೆ ಬೆಳಕು, ಬೆಳಕೆಂದರೆ ಜ್ಞಾನ, ಜ್ಞಾನವೆಂದರೆ ಮಾರ್ಗ, ಮಾರ್ಗವೆಂದರೆ ಅದು ಅಜ್ಞಾನದಲ್ಲಿರುವ ಬದುಕನ್ನು ಸಾರ್ಥಕತೆಯೆಡೆಗೆ ನಮ್ಮನ್ನು ಕೊಂಡೊಯ್ಯುವ ರಹದಾರಿ. ಆ ರಾಜಮಾರ್ಗವನ್ನು ತೋರುವವನೇ ಗುರು ಎಂದು ಮನಗೂಳಿಯ ಸಾಹಿತಿ ಸಿದ್ಧರಾಮ ಬಿರಾದಾರ ಅಭಿಪ್ರಾಯಪಟ್ಟರು.
ಇಲ್ಲಿನ ರಾಧಾಕೃಷ್ಣನ್ ನಗರ ಬಡಾವಣೆಯ ಶಿವಬಸವ ಯೋಗಾಶ್ರಮದಲ್ಲಿ ಶಿಕ್ಷಕ ದಿನಾಚರಣೆಯ ನಿಮಿತ್ಯ ಮಂಗಳವಾರ ಸಂಜೆ ಹಮ್ಮಿಕೊಳ್ಳಲಾಗಿದ್ದ ೨೧೫ನೇ ಮಾಸಿಕ ಶಿವಾನುಭವ ಗೋಷ್ಠಿಯಲ್ಲಿ ಗುರುಸ್ಮರಣೆ ವಿಷಯದ ಕುರಿತು ವಿಶೇಷ ಉಪನ್ಯಾಸ ನೀಡಿ ಮಾತನಾಡಿದರು.
ಸಾನ್ನಿಧ್ಯ ವಹಿಸಿದ್ದ ಶಿವಬಸವ ಆಶ್ರಮದ ಶಂಭುಲಿAಗ ಸ್ವಾಮೀಜಿ ಮಾತನಾಡಿ, ಬದುಕು ತೀರಾ ಅತೀ ಕಡಿಮೆ, ಚಿಕ್ಕದು, ಅತ್ಯಲ್ಪ ಎನಿಸುವಮಟ್ಟಿಗೆ ಆಗಿಬಿಟ್ಟಿದೆ. ಇತ್ತೀಚಿನ ದಿನಗಳಲ್ಲಂತೂ ಅದರಲ್ಲೂ ಈ ಹೈಬ್ರಿಡ್ ದಿನಮಾನಗಳಲ್ಲಿ ಮನುಷ್ಯ ಜೀವನವು ತೀರಾ ಕ್ಷಣಿಕ ಎನಿಸಿಬಿಟ್ಟಿದೆ. ಇಂದಿದ್ದ ಮನುಷ್ಯ ನಾಳೆ ಇರನು ಎಂಬAತಾಗಿ ಹೋಗಿದೆ. ಇದು ನಿಜವೂ ಹೌದು. ಹಾಗಾಗಿ ಮನುಷ್ಯ ಸ್ವಾರ್ಥಿಯಾಗದೆ ನಿಸ್ವಾರ್ಥಿಯಾಗಬೇಕು. ಅದಕ್ಕೆ ಸರಿಯಾದ ಗುರುವಿನ ಮಾರ್ಗದರ್ಶನವಿರಬೇಕು. ಸಾರ್ಥಕ ಹಾಗೂ ಸಮಾಜಮುಖಿ ಬದುಕನ್ನು ಕಳೆದವರೇ ನಿಜಕ್ಕೂ ಅಮರರು ಎಂದು ನುಡಿದರು.
ಕನ್ನಡ ಉಪನ್ಯಾಸಕ ಯು.ಎನ್. ಕುಂಟೋಜಿ ಮಾತನಾಡಿ, ಅಥರ್ಗಾದ ರೇವಣಸಿದ್ಧಪ್ಪ ಮಾಸ್ತರ, ಕುವೆಂಪು, ರಾಧಾಕೃಷ್ಣನ್, ಗುರುಗೋವಿಂದ ಭಟ್ಟ ಇತ್ಯಾದಿ ಮಹಾನ್‌ರಾದಿಯಾಗಿ ಅನೇಕರು ಶಿಕ್ಷಕರಿಗೆ ಮಾರ್ಗದರ್ಶಿ ಮತ್ತು ಮಾದರಿಯಾಗಿದ್ದಾರೆ. ಈಗಿನ ಶಿಕ್ಷಕರಲ್ಲಿ ಅವರ ಆದರ್ಶಗಳು ಮೈಗೂಡಿದಲ್ಲಿ ಇವತ್ತಿನ ವಿದ್ಯಾರ್ಥಿಗಳು ನಾಳೆ ಅವರಂತಾಗುವರು ಎಂಬುದರಲ್ಲಿ ಸಂದೇಹವಿಲ್ಲ ಎಂದು ತಿಳಿಸಿದರು.
ಆಶ್ರಮದ ಸಂಚಾಲಕ ರಾಜೇಂದ್ರಕುಮಾರ್ ಬಿರಾದಾರ್ ಮಾತನಾಡಿ, ಸ್ವಾಮಿಗಳಲ್ಲಿ ಮೊದಲಿಗೆ ಸ್ವಾಮಿತ್ವವಿರುವಂತೆ ಹಾಗೆಯೇ ಗುರುವಿನಲ್ಲಿಯೂ ಕೂಡ ಮೊದಲಿಗೆ ಗುರುತ್ವವಿರಬೇಕು. ತಾನು ಮೊದಲು ಕಲಿಕಾರ್ಥಿಯಾಗಿ ಅನಂತರ ವಿದ್ಯಾರ್ಥಿಗಳಿಗೆ ಬೋಧನಾರ್ಥಿಯಾಗಬೇಕು. ಜ್ಞಾನ ಮತ್ತು ಗುರುತ್ವ ಇಲ್ಲದ ಶಿಕ್ಷಕ ಅತಿಬೇಗ ಲಘುವಾಗುವನು ಎಂದು ನುಡಿದರು.
ಇದೇ ಸಂದರ್ಭದಲ್ಲಿ ನಿವೃತ್ತರಾದ ಶಿಕ್ಷಕರಿಗೆ ಹಾಗೂ ಮತ್ತಿತರ ನೌಕರ ವರ್ಗದವರಿಗೆ ಆಶ್ರಮದ ವತಿಯಿಂದ ಅಭಿನಂದಿಸಿ ಸನ್ಮಾನಿಸಲಾಯಿತು.
ಸಮಾಜ ಸೇವಕಿ ಭಾರತಿ ಟಂಕಸಾಲಿ ಶಿವಾನುಭವ ಗೋಷ್ಠಿ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಅಧ್ಯಕ್ಷತೆಯನ್ನು ನಿವೃತ್ತ ಶಿಕ್ಷಕ ಎನ್.ಎಂ. ಬಿರಾದಾರ ವಹಿಸಿಕೊಂಡಿದ್ದರು.
ಸಾಹಿತಿ ವೈಶಾಲಿ ಬೀಳೂರ, ರವೀಂದ್ರ ಜಾಧವ ಹಾಗೂ ಬಸವರಾಜ ಹಡಪದ, ಜಯಶ್ರೀ ನಂದಿಕೋಲಮಠ, ಪವಿತ್ರಾ ಬಡಿಗೇರ, ದಾನಮ್ಮ ತಾಯಿ, ಕಮಲಾಕ್ಷಿ ಗೆಜ್ಜಿ, ಮಹಾದೇವಿ ತೆಲಗಿ, ನೇತ್ರಾ ಜಾಧವ, ಕಮಲಾ ಭಜಂತ್ರಿ, ಜಯಶ್ರೀ ಜಾಧವ, ಎಸ್.ಐ. ಪಾಟೀಲ, ಅನಿಲ್ ಮಾಶ್ಯಾಳಕರ, ಆಶಾ ಚಿಮ್ಮಲಗಿ, ಚನ್ನಬಸಯ್ಯ ಹಿರೇಮಠ, ಎ.ಡಿ. ಚನಾಳ, ಬಸವರಾಜ ಮಮದಾಪುರ, ಈರಣ್ಣ ಚಿಮ್ಮಲಗಿ, ಶಿವಾಜಿ ಮೋರೆ, ಸೋಮಶೇಖರ ಕುರ್ಲೆ, ಈಶ್ವರ ಬೆಣ್ಣೂರ ಮತ್ತಿತರರಿದ್ದರು.