

ವಿಜಯಪುರ: ಮನಸ್ಸನ್ನು ಹತೋಟಿಯಲ್ಲಿರಿಸಿ, ವೈರಾಗ್ಯವನ್ನು ನಿಯಂತ್ರಿಸಿಕೊಂಡು ಸದಾ ಉತ್ತಮ ಆಲೋಚನೆ ಮೂಲಕ ನಮ್ಮ ಕೆಲಸ ಕಾರ್ಯಗಳನ್ನು ನಿರ್ವಹಿಸಿದರೆ ನರಮಾನವ ದೇವ ಮಾನವನಾಗಲು ಸಾಧ್ಯ ಎಂದು ಶಂಕರಾನಂದ ಸ್ವಾಮೀಜಿ ಹೇಳಿದರು.
ನಗರದ ಅಥಣಿ ರಸ್ತೆಯ ಸೇನಾ ನಗರದ ಶಿವಾಲಯ ದೇವಸ್ಥಾನದಲ್ಲಿ ಶಿವರಾತ್ರಿ ಅಂಗವಾಗಿ ಇತ್ತೀಚೆಗೆ ಹಮ್ಮಿಕೊಂಡಿದ್ದ 3ನೇ ದಿನದ ಪ್ರವಚನದಲ್ಲಿ ನಿಷ್ಕಾಮ ಭಕ್ತಿ ಮತ್ತು ಜನಪದ ಸಂಸತಿ ವಿಷಯ ಕುರಿತು ಉಪದೇಶ ನೀಡಿದ ಸ್ವಾಮೀಜಿಗಳು, ಕಾಕಬುದ್ಧಿತನ ಮತ್ತು ಲೋಕದ ಗೊಡವೆ ಬಿಟ್ಟು, ಆಸೆ ಅಳಿದು ಮನಸ್ಸಿನ ಹೇಸಿಗೆ ತೊಳೆದು ಸದಾ ಈಶ ಮಹಾಂತನ ಪಾದ ಹಿಡಿದು ಪ್ರಾರ್ಥಿಸಿದರೆ ಜೀವನದಲ್ಲಿ ಸಾರ್ಥಕತೆ ಸಾಧಿಸಬಹುದು ಎಂದು ಆಶೀರ್ವಚನ ನೀಡಿದರು.
ನಮ್ಮ ಭಾರತೀಯ ಸಂಸತಿಯಲ್ಲಿ ಪುರಾತನ ಕಾಲದಿಂದಲೂ ಗುರುವಿಗೆ ಉನ್ನತ ಸ್ಥಾನಮಾನ ನೀಡಲಾಗಿದೆ. ಗುರು ಶಿಷ್ಯನ ಮನದ ಇಂಗಿತ ಅರಿತು ಅರಿಷಡ್ವರ್ಗಗಳನ್ನು ನಿಗ್ರಹಿಸಿ ಅವನಲ್ಲಿ ಸದಾಚಾರ, ಸನ್ನಡತೆ, ಸದ್ವಿವೇಕ, ಸದ್ವಿಚಾರ, ಸಮಚಿತ್ತ, ಸದ್ಭಾವ ಮತ್ತು ಸದಾ ಭಗವತ್ ಚಿಂತನೆ ಬಿತ್ತಿ ಬದುಕು ಬಂಗಾರಮಯಗೊಳಿಸುತ್ತಾನೆ. ಜೀವನದಲ್ಲಿ ಗುರುಗಳ ಪಾತ್ರ ಅರಿಯುವುದರ ಮೂಲಕ ಅವರ ಉಪದೇಶ, ತೋರುವ ಸನ್ಮಾರ್ಗದಡಿ ನಡೆದರೆ ಜೀವನ ಖಂಡಿತ ಪುನೀತವಾಗಲಿದೆ ಎಂದು ಹೇಳಿದರು.
ದೇವಸ್ಥಾನದ ಅಭಿವೃದ್ಧಿಗೆ ಸಹಕರಿಸಿದ ವಿಠಲ ಜಗತಾಪ, ವಿಶ್ವನಾಥ ಹಿರೇಮಠ, ಸುಭಾಸ ಕಟ್ಟಿಮನಿ, ಬಿ.ವಿ. ಕುಂಬಾರ ಸನ್ಮಾನಿಸಲಾಯಿತು.
ಗುರುಬಸಯ್ಯ ಹಿರೇಮಠ, ಮೋಹನಸಿಂಗ್ ಪತ್ತಾರ, ಅರವಿಂದ ಹಂಗರಗಿ, ವಿಶ್ವನಾಥ ತೋಟದ, ಚನ್ನವಿರ ಬಿಜ್ಜರಗಿ, ಶ್ರೀಶೈಲ ಬೀಳೂರ, ಶೋಭಾ ಚವಾಣ, ರಾಜಶೇಖರ ಉಮರಾಣಿ, ಭರಮಣ್ಣ ಕಡಕೋಳ, ಶಿವಯೋಗೆಪ್ಪ ಹತ್ತಿ, ಶ್ರೀಶೈಲ ಅವಜಿ, ಪ್ರಫುಲ ನಿಂಬಾಳಕರ, ಅಲ್ಲಮಪ್ರಭು ಶಿರಹಟ್ಟಿ, ಕಾಶಿಲಿಂಗ ಶೇಗಾವಿ, ಅಪ್ಪಾಸಾಹೇಬ ಹಂಚಿನಾಳ, ಸಾವಿತ್ರಿ ಹಿರೇಮಠ, ಶಾಂತಾ ಕಪಾಳಿ ಮತ್ತಿತರರಿದ್ದರು.