ಗುರುವಿನಲ್ಲಿದೆ ಶಿಷ್ಯನನ್ನು ಉದ್ಧರಿಸುವ ಶಕ್ತಿ

HOLE ALUR-3 SANMAN
Published on

ಹೊಳೆಆಲೂರ: ಏನೂ ತಿಳಿಯದ ಸಾಮಾನ್ಯರಲ್ಲಿ ಜೀವನದ ಮೌಲ್ಯಗಳು, ಜೀವನದ ಅರ್ಥ ಹಾಗೂ ಗುರಿ ಸಾಧಿಸಲು ಬೇಕಾಗುವ ಮಾರ್ಗದರ್ಶನ ನೀಡಿ ಸಮಾಜದ ಆಸ್ತಿಯನ್ನಾಗಿಸುವ ಅದ್ಭುತ ಶಕ್ತಿ ಗುರುವಿನಲ್ಲಿ ಅಡಗಿರುತ್ತದೆ ಎಂದು ಖಜೂರಿ ಕೋರಣೇಶ್ವರ ಮಠದ ಮುರಘೕಂದ್ರ ಕೋರಣೇಶ್ವರ ಸ್ವಾಮೀಜಿ ಹೇಳಿದರು.

ಸಮೀಪದ ಅಸೂಟಿ ಗ್ರಾಮದ ಸರ್ಕಾರಿ ಪ್ರಾಥಮಿಕ ಶಾಲೆ ಹಾಗೂ ಫಲಹಾರೇಶ್ವರ ಪ್ರೌಢಶಾಲೆಯಲ್ಲಿ 1988ರಿಂದ 1996 ರವರೆಗೆ ವ್ಯಾಸಂಗ ಮಾಡಿದ ಸ್ನೇಹ ಸಂಗಮ ವಿದ್ಯಾರ್ಥಿ ಬಳಗದಿಂದ ಸೋಮವಾರ ಏರ್ಪಡಿಸಿದ್ದ ಗುರುವಂದನಾ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಅವರು ಮಾತನಾಡಿದರು. ‘ಶ್ರೇಷ್ಠ ಗುರು ತಾನು ಭೌತಿಕ ವಸ್ತು ಎಂದು ಭಾವಿಸಿಕೊಳ್ಳುವುದಿಲ್ಲ. ತನ್ನಲ್ಲಿನ ಜ್ಞಾನದ ಕಣಜವನ್ನು ಶಿಷ್ಯನೆಡೆಗೆ ಪ್ರಾಮಾಣಿಕವಾಗಿ ಪ್ರವಹಿಸುವ ಶಕ್ತಿ ಎಂದು ಅರಿತುಕೊಳ್ಳಬೇಕು. ವಿದ್ಯಾರ್ಥಿಗಳು ಸಹ ಗುರುವಿನ ಮೇಲೆ ಗಮನ ಕೇಂದ್ರೀಕರಿಸುತ್ತ ಅವರಲ್ಲಿನ ಗುಣಗಳನ್ನು ಪಡೆದುಕೊಳ್ಳಬೇಕು ಎಂದರು.

ಉಪನ್ಯಾಸಕ ವಿಶ್ವನಾಥ ಪಾಟೀಲ ಮಾತನಾಡಿ, ಭಾರತದಲ್ಲಿ ಗುರು ಪರಂಪರೆಯ ಭಕ್ತಿ ಅನಾದಿ ಕಾಲದಿಂದಲೂ ಬೆಳೆದು ಬಂದಿದೆ. ಭೂಮಂಡಲದಲ್ಲಿ ಎಲ್ಲ ಪ್ರಾಣಿಗಳಂತೆ ಮನುಷ್ಯ ಪ್ರಾಣಿ ಆಗಿದ್ದರೂ ಭಿನ್ನವಾಗಿ ಆಲೋಚನೆ ಮಾಡಲು, ಸನ್ಮಾರ್ಗದಲ್ಲಿ ಸಾಗಲು ಗುರು ಕಾರುಣ್ಯ ಅವಶ್ಯವಾಗಿ ಬೇಕು ಎಂದರು.

ರೇವಣಸಿದ್ಧೇಶ್ವರ ಸ್ವಾಮೀಜಿ, ಶರಣೆ ನೀಲಲೋಚನ ತಾಯಿ ಸಾನ್ನಿಧ್ಯ ವಹಿಸಿದ್ದರು. ಶಿಕ್ಷಕ ಬಿ.ಬಿ. ಪಿಂಜಾರ ಅಧ್ಯಕ್ಷತೆ ವಹಿಸಿದ್ದರು. ಮುಖ್ಯೋಪಾಧ್ಯಾಯ ಎಸ್.ಜಿ. ಸವದಿ, ಪಿ.ಎಸ್. ಹೊಸಳ್ಳಿ, ಎಂ.ಎಸ್. ಮಲ್ಲಾಪೂರ, ಶಿಕ್ಷಕರಾದ ವಿ.ಎನ್. ಚಲವಾದಿ, ಬಿ.ಎಚ್. ಕುರಹಟ್ಟಿ, ಎಸ್.ಆರ್. ಹಳೇಗೌಡ್ರ, ಸಿ.ಎಸ್. ಹರಗಬಾಳ, ಎಸ್.ಎಸ್. ಪಾಟೀಲ, ಬಿ.ಬಿ. ವಾಲ್ಮೀಕಿ, ಪ್ರೌಢ ಶಾಲೆ ಶಿಕ್ಷಕರಾದ ಎಸ್.ಎಸ್. ದಾನರಡ್ಡಿ, ಪಿ.ಸಿ. ಸಜ್ಜನ, ಎಸ್.ಎಂ. ಹೊಸಮನಿ, ಎಂ.ಸಿ. ಪತ್ತಾರ, ಎಸ್.ಎಂ. ಜೋಗಳೇಕರ, ಎಂ. ಜಗದೀಶ, ಆರ್.ಆರ್. ಅರಹುಣಸಿ, ಆರ್.ಎಂ. ಅತ್ತಾರ, ಬಿ.ಎಚ್. ಕರಡಿ, ಕುಬೇರಪ್ಪ ಹರ್ತಿ, ವಿ.ಎಫ್. ಗಟ್ಟಿ, ಆರ್.ಎಸ್. ಸಾವಳಗಿಮಠ, ಸಂಗಪ್ಪ ಚಲವಾದಿ ಅವರನ್ನು ಕಾರ್ಯಕ್ರಮದಲ್ಲಿ ಸನ್ಮಾನಿಸಲಾಯಿತು. ಕಾರ್ಯಕ್ರಮದ ಅಂಗವಾಗಿ ಗ್ರಾಮದ ಪ್ರಮುಖ ಬೀದಿಗಳಲ್ಲಿ ಗುರುವರ್ಯರ ಅದ್ದೂರಿ ಮೆರವಣಿಗೆ ಜರುಗಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net