

ಗೋಕರ್ಣ: ಎರಡು ಆತ್ಮಗಳ ನಡುವಿನ ಸಂಬಂಧ ಯಾವತ್ತೂ ಅವಿನಾಶಿನಿಯಾದ ಶಾಶ್ವತ ಸಂಬಂಧವಾಗಿದೆ. ಗುರು-ಶಿಷ್ಯರ ಮಧ್ಯದ ಸಂಬಂಧ ಏರ್ಪಡುವುದು ಇಂಥ ಆತ್ಮಗಳ ಸ್ತರದಲ್ಲಾಗಿದೆ ಎಂದು ಶ್ರೀ ರಾಘವೇಶ್ವರ ಭಾರತೀ ಸ್ವಾಮೀಜಿ ನುಡಿದರು.
ಇಲ್ಲಿನ ವಿಷ್ಣುಗುಪ್ತ ವಿಶ್ವವಿದ್ಯಾಪೀಠದಲ್ಲಿ ಸಂಘಟನಾ ಚಾತುರ್ವಸ್ಯ ವ್ರತಧಾರಿಗಳಾದ ಶ್ರೀಗಳು ಶನಿವಾರ ಆಯೋಜಿಸಿದ್ದ ಮಂಗಳೂರು ಮಂಡಲದ ಕೇಪು, ವಿಟ್ಲ, ಕಲ್ಲಡ್ಕ ಮತ್ತು ಕುಂದಾಪುರ ವಲಯಗಳ ಶಿಷ್ಯಭಕ್ತರ ಭಿಕ್ಷಾಸೇವೆಯಲ್ಲಿ ಅನುಗ್ರಹ ಆಶೀರ್ವಾದ ದಯಪಾಲಿಸಿದರು.
ದೇಹಗಳ ಸಂಬಂಧ ದೈಹಿಕ ಸೌಂದರ್ಯ ಕುಂದಿದಂತೆ ಶಿಥಿಲವಾಗುತ್ತ ಸಾಗುತ್ತದೆ. ಆದರೆ, ಮನಸುಗಳ ನಡುವಿರುವ ಸಂಬಂಧ ಜೀವವಿರುವವರೆಗೂ ಇದ್ದು ಅಮರವಾಗುತ್ತದೆ. ಇವತ್ತಿನ ಆಧುನಿಕ ಎನ್ನಲಾಗುವ ವಿಷಮ ಕಾಲಘಟ್ಟದಲ್ಲಿ ಆಸ್ತಿ, ಸಂಪತ್ತು ಮತ್ತು ಸ್ವಾರ್ಥಾರ್ಜನೆಗಾಗಿ ಸಹೋದರರ ನಡುವಿನ ಸಂಬಂಧವೇ ಕಡಿದು ಬೀಳುತ್ತದೆ. ಆದರೆ, ಗುರು -ಶಿಷ್ಯರ ಸಂಬಂಧ ಆಸ್ತಿ-ಅಂತಸ್ತನ್ನು ಆಧರಿಸಿ ಆದುದಲ್ಲ. ಇದು ಸಮಾಜದ ಯೋಗಕ್ಷೇಮದ ಉದ್ದೇಶದ ನಿಸ್ವಾರ್ಥಮಯ ಸಂಬಂಧವಾಗಿದೆ. ಹೀಗಾಗಿ ಗುರು ಶಿಷ್ಯ ಬಂಧ ಅತ್ಯಂತ ಶ್ರೇಷ್ಠ ಮತ್ತು ಪವಿತ್ರವಾದುದಾಗಿದೆ ಎಂದರು.
ಗುರು ಕಾರ್ಯದಲ್ಲಿರುವವನಿಗೆ ಸದಾ ನೆಮ್ಮದಿ ಮತ್ತು ಜೀವನ ಸಾರ್ಥಕ್ಯವಿರುತ್ತದೆ. ಧನಕ್ಕಿಂತ ಧರ್ಮ ಪ್ರಧಾನ ಎನ್ನುವ ಇಂತಹ ಗುರುಕಾರ್ಯಗಳು ಸಮಾಜದಲ್ಲಿ ನೊಂದವರ ಕಷ್ಟಗಳಿಗೆ ನಾವು ಸ್ಪಂದಿಸಿದಾಗ ಮಾತ್ರ ಪರಿಪೂರ್ಣವಾಗುತ್ತವೆ. ಇದು ಮತ್ತಷ್ಟು ಸೇವೆಗೆ ಪ್ರೇರಣೆಯಾಗುವುದಲ್ಲದೆ, ಯುವ ಸಮುದಾಯಕ್ಕೆ ಸ್ಪೂರ್ತಿಯೂ ಆಗಬಲ್ಲದು ಎಂದು ಶ್ರೀಗಳು ಸಂದೇಶವಿತ್ತರು.
ಹವ್ಯಕ ಮಹಾಮಂಡಲ ಅಧ್ಯಕ್ಷ ಮೋಹನ ಭಾಸ್ಕರ ಹೆಗಡೆ, ಪ್ರಧಾನ ಕಾರ್ಯದರ್ಶಿ ಉದಯಶಂಕರ ಭಟ್ಟ ಮಿತ್ತೂರು, ಮಂಗಳೂರು ಮಂಡಲಾಧ್ಯಕ್ಷ ಉದಯಶಂಕರ ನೀರ್ಪಾಜೆ, ಕಾರ್ಯದರ್ಶಿ ರಮೇಶ ಭಟ್ಟ ಸರವು, ಉಪಾಧ್ಯಕ್ಷ ರಾಜಶೇಖರ ಕಾಕುಂಜೆ, ಕೋಶಾಧ್ಯಕ್ಷ ಮಹೇಶ್ವರ ಭಟ್ಟ ಕೆ., ಸಂಘಟನಾ ಕಾರ್ಯದರ್ಶಿ ಕೃಷ್ಣಮೂರ್ತಿ ಕಮ್ಮಜೆ, ವೈದಿಕ ಪ್ರಧಾನ ಅಮೈ ಶಿವಪ್ರಸಾದ ಭಟ್ಟ, ಚಾತುರ್ವಸ್ಯ ಸಮಿತಿ ಅಧ್ಯಕ್ಷ ಯು.ಎಸ್.ಜಿ. ಭಟ್ಟ,ಕಾರ್ಯಾಲಯ ಕಾರ್ಯದರ್ಶಿ ಜಿ.ವಿ. ಹೆಗಡೆ, ಲೋಕಸಂಪರ್ಕಾಧಿಕಾರಿ ಜಿ.ಕೆ. ಹೆಗಡೆ ಮತ್ತಿತರ ಪ್ರಮುಖರಿದ್ದರು. ಸಮಾಜ ಸೇವೆಗೈದವರಿಗೆ ಸಾಧಕ ಸನ್ಮಾನ ಮತ್ತು ಪ್ರತಿಭಾ ಸಂಪನ್ನ ವಿದ್ಯಾರ್ಥಿಗಳಿಗೆ ವಿಶೇಷ ಪುರಸ್ಕಾರ ನೀಡಿ ಗೌರವಿಸಲಾಯಿತು.