ಗುರು ಸ್ಮರಣೆಯಿಂದ ಪಾಪ ನಾಶ

7Harugeri1
Published on

ಹಾರೂಗೇರಿ: ಗುರುವಿನ ಚರಣ ಕಮಲದಲ್ಲಿ ಅಖಂಡ ಭಕ್ತಿ ಇಟ್ಟು ಸ್ಮರಣೆ ಹಾಗೂ ಚಿಂತನೆ ಮಾಡುವುದರಿಂದ ಪಾಪ ನಾಶವಾಗಿ ಹೃದಯದಲ್ಲಿ ಆತ್ಮಸಾಕ್ಷಾತ್ಕಾರವಾಗುತ್ತದೆ ಎಂದು ಡಾ.ಶಿವಾನಂದ ಭಾರತಿ ಸ್ವಾಮೀಜಿ ಹೇಳಿದರು.

ಪಟ್ಟಣದ ಚನ್ನವೃಷಭೇಂದ್ರ ಲೀಲಾಮಠದ ಶಿವಾನಂದ ಭಾರತಿ ಸ್ವಾಮೀಜಿ ಸಭಾಭವನದಲ್ಲಿ ಜರುಗಿದ 42ನೇ ವೇದಾಂತ ಪರಿಷತ್ ಜಾತ್ರಾ ಮಹೋತ್ಸವದ ಕೊನೆಯ ದಿನದ ಕಾರ್ಯಕ್ರಮದಲ್ಲಿ ಮಾತನಾಡಿದರು.

ಇಂಗಳಗಾವಿ ಸಿದ್ಧಲಿಂಗ ಸ್ವಾಮೀಜಿ ಮಾತನಾಡಿ, ಗುರುವಿನ ಗುಲಾಮನಾಗಿ ಅನನ್ಯ ಭಕ್ತಿಯಿಂದ ಧ್ಯಾನಿಸಿದರೆ ಇಷ್ಟಾರ್ಥ ಸಿದ್ಧಿಸುತ್ತದೆ. ಮನಸ್ಸನ್ನು ನಿಯಂತ್ರಿಸಿ ಹತೋಟಿಗೆ ತರುವ ಜ್ಞಾನ ಗುರುವಿನಲ್ಲಿ ಅಡಗಿದೆ ಎಂದರು.

ಇಂಚಲದ ವಿದ್ಯಾನಂದ ಭಾರತಿ ಸ್ವಾಮೀಜಿ ಮಾತನಾಡಿ, ಗುರುವಿನ ಅನುಗ್ರಹದಿಂದ ನಮ್ಮಲ್ಲಿನ ಅಜ್ಞಾನ, ಅಂಧಕಾರ ಸುಟ್ಟು ಆತ್ಮಜ್ಞಾನವಾಗುತ್ತದೆ ಎಂದು ಹೇಳಿದರು. ಇಂಚಲದ ಪೂರ್ಣಾನಂದ ಭಾರತಿ ಸ್ವಾಮೀಜಿ, ಪರಮಾನಂದವಾಡಿಯ ಡಾ.ಅಭಿನವ ಬ್ರಹ್ಮಾನಂದ ಸ್ವಾಮೀಜಿ, ಅನಗವಾಡಿಯ ಅನುಸೂಯತಾಯಿ, ಕಲ್ಲೂರದ ಶಿವರಾಮಾನಂದ ಸ್ವಾಮೀಜಿ, ಕಲಬುರ್ಗಿಯ ಲಕ್ಷ್ಮೀ ತಾಯಿ ಆಶೀರ್ವಚನ ನೀಡಿದರು. ಹುಬ್ಬಳ್ಳಿಯ ಸಿದ್ಧಾರೂಢ ಮಠದ ಧರ್ಮದರ್ಶಿ ಚನ್ನವೀರ ಮುಂಗುರವಾಡಿ, ಶಿವಗೊಂಡ ಧರ್ಮಟ್ಟಿ, ಲಾಲಸಾಬ್ ಜಮಾದಾರ, ಶಶಿಧರ ಶಿಂಗೆ, ರಾಜು ಕರ್ಣವಾಡಿ, ವಿಠ್ಠಲ ಬಂತಿ, ಗೋಪಾಲ ಧರ್ಮಟ್ಟಿ, ವಿಜಯ ಬಂತಿ, ಬಾಬು ಹಳ್ಳೂರ್, ತಮ್ಮಾಣಿ ಕುರಿ, ಸುರೇಶ ಐಹೊಳೆ, ರಾಘವೇಂದ್ರ ದೇಶಪಾಂಡೆ ಇತರರು ಇದ್ದರು. ಶ್ರೀ ಮಠದ ಕಾರ್ಯದರ್ಶಿ ಅಪ್ಪಾಸಾಹೇಬ ಕುಲಕರ್ಣಿ ನಿರೂಪಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net