ಸಮಾಜ, ಧರ್ಮದ ಸೇವೆ ಮಾಡಿದವರನ್ನು ಸ್ಮರಿಸಿ

21 chn
Published on

ಚನ್ನಗಿರಿ: ಸಮಾಜ ಮತ್ತು ಧರ್ಮದ ಸೇವೆ ಮಾಡಿದವರನ್ನು ಸ್ಮರಿಸುವುದು ನಮ್ಮ ಧರ್ಮ ಎನ್ನುವುದು ಶರಣರ ನೀತಿಯಾಗಿದೆ ಎಂದು ಪಾಂಡೋಮಟ್ಟಿ ವಿರಕ್ತ ಮಠದ ಡಾ. ಗುರುಬಸವ ಸ್ವಾಮೀಜಿ ತಿಳಿಸಿದರು.

ತಾಲೂಕಿನ ಪಾಂಡೋಮಟ್ಟಿ ಗ್ರಾಮದ ವಿರಕ್ತ ಮಠದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಜಗಜ್ಯೋತಿ ವಿಶ್ವಗುರು ಬಸವಣ್ಣ ಮತ್ತು ಶರಣೆ ಅಕ್ಕಮಹಾದೇವಿ ಅವರ ಜಯಂತ್ಯುತ್ಸವ ಹಾಗೂ 870ನೇ ಮಾಸಿಕ ಶಿವಾನುಭವ ಕಾರ್ಯಕ್ರಮದಲ್ಲಿ ಮಾತನಾಡಿದರು.

12ನೇ ಶತಮಾನದಲ್ಲಿ ಇದ್ದಂತ ಮೌಢ್ಯ, ಕಂದಾಚಾರ, ಜಾತಿ ವ್ಯವಸ್ಥೆ ವಿರುದ್ಧ ಹೋರಾಟ ಮಾಡುವ ಮೂಲಕ ಸಮಾಜದಲ್ಲಿನ ಹಾಗೂ ಜನರ ಮನಸ್ಸಿನಲ್ಲಿನ ದ್ವೇಷ, ಅಸೂಯೆಯನ್ನು ದೂರ ಮಾಡಿ, ಪ್ರೀತಿ, ಬಾಂಧವ್ಯವನ್ನು ಹುಟ್ಟುಹಾಕಿ ಮಾನವ ಜನ್ಮ ದೊಡ್ಡದು, ಎಲ್ಲರೂ ಒಂದೇ ಎನ್ನುವ ಸಾರವನ್ನು ತಿಳಿಸಿದರು. ಆದ್ದರಿಂದ ಅವರು ವಿಶ್ವಮಾನವರಾಗಿ ವಿಶ್ವದ ಜನರ ಮನಸ್ಸಿನಲ್ಲಿ ಇಂದಿಗೂ ನೆಲೆಸಿದ್ದಾರೆ. ಸಮ ಸಮಾಜಕ್ಕೆ ಶ್ರಮಿಸಿ ಅನುಭವ ಮಂಟಪದ ಮೂಲಕ ಸಮಾನತೆಯನ್ನು ಸಾರಿದರು. ಬಸವಣ್ಣನವರ 5 ಅಡಿ ಎತ್ತರದ ಪುತ್ಥಳಿಯನ್ನು ಗ್ರಾಮದ ಬಸ್ ನಿಲ್ದಾಣದಲ್ಲಿ ಏ.30 ಬಸವೇಶ್ವರ ಜಯಂತಿಯಂದು ಅನಾವರಣ ಮಾಡಲಾಗುತ್ತದೆ ಎಂದರು.

ಮಹಿಳೆ ಅಪೇಕ್ಷೆಪಟ್ಟಲ್ಲಿ ಸಂಸಾರದ ಬಂಧನವನ್ನು ತ್ಯಜಿಸಿ ಆಧ್ಯಾತ್ಮಿಕ ಸಾಧನೆಯತ್ತ ಸಾಗಬಲ್ಲಳು ಎಂಬುದಕ್ಕೆ ಅಕ್ಕಮಹಾದೇವಿ ಉತ್ತಮ ಉದಾಹರಣೆಯಾಗಿದ್ದಾಳೆ. ಲಿಂಗಾಯತ ಧರ್ಮದಲ್ಲಿ ವೈಜ್ಞಾನಿಕತೆ, ವೈಚಾರಿಕತೆ, ಸರಳತೆಯನ್ನು ಪ್ರತಿಯೊಬ್ಬರು ಒಪ್ಪಬಹುದಾದ ಅಂಶಗಳು ಇವೆ ಎಂದರು ತಿಳಿಸಿದರು.

ಶಿವಮೊಗ್ಗ ಲೋಕಾಯುಕ್ತ ಡಿವೈಎಸ್​ಪಿ ಚಂದ್ರಶೇಖರ್ ಮಾತನಾಡಿ, ಶರಣರ ವಚನಗಳ ಸಂರಕ್ಷಕ ಹಳಕಟ್ಟಿ ಅವರಿಗೂ ಪಾಂಡೋಮಟ್ಟಿ ವಿರಕ್ತ ಮಠಕ್ಕೂ ಸಂಬಂಧವಿತ್ತು ಎಂಬುದಕ್ಕೆ ಹಳಕಟ್ಟಿಯವರು ಮಠಕ್ಕೆ ಬರೆದ ಪತ್ರ ಇಂದಿಗೂ ನೋಡಬಹುದು. ಬೇಡುವಂತಹ ಶ್ರೀಮಂತಿಕೆ ಎಂದಿಗೂ ಬರಬಾರದು. ಮನುಷ್ಯ ತೃಪ್ತಿಯಿಂದ ಜೀವನ ನಡೆಸಬೇಕು. ಇಂದು ಸ್ಕ್ಯಾನಿಂಗ್ ಸೆಂಟರ್​ಗಳು ಹೆಚ್ಚಾದಷ್ಟು ಹೆಣ್ಣು ಭ್ರೂಣ ಹತ್ಯೆಗಳು ಹೆಚ್ಚಾಗುತ್ತಿರುವುದು ದುರಂತವಾಗಿದೆ ಎಂದು ಬೇಸರ ವ್ಯಕ್ತಪಡಿಸಿದರು.

ಸಂತೇಬೆನ್ನೂರು ಪ್ರಾಧ್ಯಾಪಕಿ ಜಿ.ಟಿ. ಜ್ಯೋತಿ ಉಪನ್ಯಾಸ ನೀಡಿದರು. ಶಿವಮೊಗ್ಗ ಲೋಕಾಯುಕ್ತ ಸಿಪಿಐ ವೀರಬಸಪ್ಪ ಕುಸಲಾಪುರ, ಡಾ. ಇಂಚರಾ ಮಾತನಾಡಿದರು. ಲಕ್ಷ್ಮೀಸಾಗರ ಮಂಜುನಾಥ್, ಪಾಂಡೋಮಟ್ಟಿ ಕಂಚಿಗನಾಳರ ನಂಜಪ್ಪ, ಮಲಹಾಳ್ ಜಂತುಕೊಳರ ಉಜ್ಜಿನಪ್ಪ, ಚಂದ್ರಪ್ಪ, ಎಂ.ಯು. ಚನ್ನಬಸಪ್ಪ, ವಕೀಲ ರಾಜಪ್ಪ, ಧನಂಜಯ್, ನಾಗರಾಜ್ ಕಾಕನೂರು, ಶಿವಮೂರ್ತಪ್ಪ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net