

ನರೇಗಲ್ಲ: ಸಮೀಪದ ಹಾಲಕೆರೆಯ ಶ್ರೀ ಅನ್ನದಾನೇಶ್ವರ ಸಂಸ್ಥಾನ ಮಠದಲ್ಲಿ ಪ್ರತಿವರ್ಷ ಶ್ರಾವಣ ಮಾಸದ 2ನೇ ಸೋಮವಾರ ಮಹಿಳೆಯರೇ ಬೆಳ್ಳಿ ರಥ ಎಳೆಯುವುದು ವಿಶೇಷವಾಗಿದೆ.
ತೇರು ಎಳೆಯವುದು ಮತ್ತು ಧಾರ್ಮಿಕ ಕ್ಷೇತ್ರದಲ್ಲಿ ಮಹಿಳೆಯರಿಗೂ ಪ್ರಾತಿನಿಧ್ಯ ನೀಡುವ ಉದ್ದೇಶದಿಂದ ಲಿಂಗೈಕ್ಯ. ಡಾ. ಅಭಿನವ ಅನ್ನದಾನ ಮಹಾಸ್ವಾಮೀಜಿ ಅವರು 2005ರಲ್ಲಿ 165 ಕೆಜಿ ತೂಕದ ಬೆಳ್ಳಿ ರಥ ನಿರ್ಮಿಸಿದರು. ಕಳೆದ 18 ವರ್ಷಗಳಿಂದ ಮಹಿಳೆಯರು ತೇರು ಎಳೆಯುತ್ತಿದ್ದಾರೆ. ತೇರಿಗೆ ಹೂವನ್ನು ಮಾತ್ರ ಎಸೆಯಲಾಗುತ್ತದೆ.
ಆ.28ರಂದು ಬೆಳಗ್ಗೆ 11 ಗಂಟೆಗೆ 501 ಮುತ್ತೈದೆಯರಿಗೆ ಉಡಿ ತುಂಬುವ ಕಾರ್ಯಕ್ರಮ ಜರುಗಲಿದೆ. ಸಂಜೆ 5 ಗಂಟೆಗೆ ಸಕಲ ವಾದ್ಯವೈಭವಗಳೊಂದಿಗೆ ಬೆಳ್ಳಿ ರಥೋತ್ಸವ ಜರುಗಲಿದೆ. ಸಚಿವೆ ಲಕ್ಷ್ಮೀ ಹೆಬ್ಬಾಳಕರ ರಥೋತ್ಸವಕ್ಕೆ ಚಾಲನೆ ನೀಡುವರು. ಸಂಜೆ 6 ಗಂಟೆಗೆ ಶಿವಾನುಭವಗೋಷ್ಠಿ ಜರುಗಲಿದ್ದು, ಧಾರವಾಡ ಮುರಘಾಮಠದ ಮಲ್ಲಿಕಾರ್ಜುನ ಸ್ವಾಮೀಜಿ ಸಾನ್ನಿಧ್ಯ ವಹಿಸುವರು. ಮಣಕವಾಡ ಅನ್ನದಾನೇಶ್ವರ ದೇವಮಂದಿರ ಮಹಾಮಠದ ಅಭಿನವ ಮೃತ್ಯುಂಜಯ ಸ್ವಾಮೀಜಿ ನೇತೃತ್ವ ವಹಿಸುವರು. ಖೇಳಗಿ ಶಿವಲಿಂಗೇಶ್ವರ ಸಂಸ್ಥಾನಮಠದ ಶಿವಲಿಂಗ ಸ್ವಾಮೀಜಿ ಅಧ್ಯಕ್ಷತೆ ವಹಿಸುವರು.
ಗುಳೆದಗುಡ್ಡ ಮರಡಿಮಠದ ಅಭಿನವ ಕಾಡಸಿದ್ಧೇಶ್ವರ ಶಿವಾಚಾರ್ಯರು, ಕುರುಗೋಡು-ನಾಗಲಾಪೂರ ನಿರಂಜನ ದೇವರು ಸೇರಿದಂತೆ ಹರಗುರು ಚರಮೂರ್ತಿಗಳು ಸಮ್ಮುಖ ವಹಿಸುವರು. ಹರಪನಹಳ್ಳಿ ಶಾಸಕಿ ಎಂ.ಪಿ ಲತಾ ಮಲ್ಲಿಕಾರ್ಜುನ, ಜಿಲ್ಲಾಧಿಕಾರಿ ವೈಶಾಲಿ ಎಂ.ಎಲ್ ಸೇರಿದಂತೆ ಇತರರು ಆಗಮಿಸಲಿದ್ದಾರೆ. ಹನಮನಹಟ್ಟಿ ಕೃಷಿ ವಿಶ್ವವಿದ್ಯಾಲಯ ಪ್ರಾಧ್ಯಾಪಕಿ ಡಾ.ಪುಷ್ಪಾ ಶಲವಡಿಮಠ ಉಪನ್ಯಾಸ ನೀಡುವರು. ಹಿರಿಯ ತಾಯಂದಿರಿಗೆ ಸನ್ಮಾನ ಜರುಗಲಿದೆ. ಅನ್ನದಾನ ವಿಜಯ ವಿದ್ಯಾಪ್ರಸಾರಕ ಸಮಿತಿಯ ಅಂಗಸಂಸ್ಥೆಗಳ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ ಜರುಗಲಿವೆ.