

ಸಿಂಧನೂರು: ತಾಲೂಕಿನ ತುರ್ವಿಹಾಳ ಪಟ್ಟಣದ ಗುರು ಅಮೋಘ ಸಿದ್ದೇಶ್ವರ ಮಠದಲ್ಲಿ ನಿರ್ಮಾಣವಾದ ಕನಕ ಭವನದ ಉದ್ಘಾಟನಾ ಸಮಾರಂಭದ ಅಂಗವಾಗಿ ಫೆ.11 ರಿಂದ 16ರವರೆಗೆ ಆಧ್ಯಾತ್ಮಿಕ ಪ್ರವಚನ, ಸಾಮೂಹಿಕ ವಿವಾಹ ಕಾರ್ಯಕ್ರಮ ಆಯೋಜಿಸಲಾಗಿದೆಂದು ಶ್ರೀಮಠದ ಪೀಠಾಧಿಪತಿ ಮಾದಯ್ಯ ಗುರುವಿನ್ ತಿಳಿಸಿದರು.
ತುರ್ವಿಹಾಳ ಪಟ್ಟಣದ ಗುರು ಅಮೋಘಸಿದ್ದೇಶ್ವರ ಮಠದಲ್ಲಿ ಭಾನುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಆರು ದಿನ ಸಂಜೆ 6 ರಿಂದ 9 ಗಂಟೆಯವರೆಗೆ ಆಧ್ಯಾತ್ಮಿಕ ಪ್ರವಚನ ನಡೆಯಲಿದೆ. ಆಧ್ಯಾತ್ಮಿಕ ಸಂತರ ಸಮಾವೇಶ ಸೇರಿ ಪ್ರಮುಖ ಕಾರ್ಯಕ್ರಮಗಳು ನಡೆಯಲಿದ್ದು, ಪಕ್ಷಾತೀತ, ಧರ್ಮಾತೀತ, ಜಾತ್ಯಾತೀತವಾಗಿ ಕಾರ್ಯಕ್ರಮವನ್ನು ಆಯೋಜಿಸಿದ್ದು, ಎಲ್ಲರೂ ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳಬೇಕು ಎಂದರು.
ಮಠದ ಚಿದಾನಂದಯ್ಯ ಗುರುವಿನ್ ಮಾತನಾಡಿ, ಫೆ.15 ರಂದು ಬೆಳಗ್ಗೆ 8.30 ಕ್ಕೆ 1008 ಕುಂಭ, 201 ಡೊಳ್ಳು ಮತ್ತು ವಿವಿಧ ಸಾಂಸ್ಕೃತಿಕ ಕಲಾ ತಂಡಗಳೊಂದಿಗೆ ನಾಡಿನ ಹಲವು ದಾರ್ಶನಿಕ ಸಂತರ ಭಾವಚಿತ್ರಗಳ ಮೆರವಣಿಗೆ ಹಾಗು ಸಂತ ಸಮಾವೇಶ ನಡೆಯಲಿದೆ. ಫೆ.16 ರಂದು ಬೆಳಗ್ಗೆ 9 ಗಂಟೆಗೆ 108 ಜೋಡಿಗಳ ಸಾಮೂಹಿಕ ವಿವಾಹ ಮಹೋತ್ಸವ ನಡೆಯಲಿದೆ. ಕನಕದಾಸರು ಮತ್ತು ಸಂಗೊಳ್ಳಿ ರಾಯಣ್ಣನವರ ಪುತ್ಥಳಿ ಅನಾವರಣವಾಗಲಿದೆ. ನಾಡಿನ ಮಠಾಧೀಶರು ಹಾಗೂ ಮುಖ್ಯಮಂತ್ರಿ ಸಿದ್ದರಾಮಯ್ಯ ಸೇರಿದಂತೆ ಸಚಿವರು, ಶಾಸಕರು, ಹಾಲಿ, ಮಾಜಿ ಜನಪ್ರತಿನಿಧಿಗಳು ಪಾಲ್ಗೊಳ್ಳುವರು ಎಂದು ತಿಳಿಸಿದರು.
ಸಾಮೂಹಿಕ ವಿವಾಹದಲ್ಲಿ ಸರ್ವಧರ್ಮೀಯರು ಮದುವೆಯಾಗಬಹುದು. ಯಾವುದೇ ನೋಂದಣಿ ಶುಲ್ಕವಿರುವುದಿಲ್ಲ. ಸರ್ಕಾರದ ನಿಯಮಾನುಸಾರ ದಾಖಲೆಗಳನ್ನು ನೀಡಬೇಕು. ಹಾಗೆಯೇ ಫೆ.5ರೊಳಗಾಗಿ ವಿವಾಹಕ್ಕೆ ನೋಂದಣಿ ಮಾಡಬೇಕು. ಹೆಚ್ಚಿನ ಮಾಹಿತಿಗೆ 9945648851, 9945402899 ಸಂಪರ್ಕಿಸಬಹುದಾಗಿದೆಂದರು.
ಮಾಜಿ ಸಂಸದ ಕೆ.ವಿರೂಪಾಕ್ಷಪ್ಪ, ಸರ್ವೇಶ್ವರಮಠದ ಗುಂಡಯ್ಯ ಅಪ್ಪಾಜಿ, ಪುರವರಮಠದ ಅಮರಗುಂಡ ಶಿವಾಚಾರ್ಯಸ್ವಾಮೀಜಿ, ಶಾಸಕ ಆರ್.ಬಸನಗೌಡ ತುರ್ವಿಹಾಳ, ಪ್ರಮುಖರಾದ ಮಲ್ಲನಗೌಡ ದೇವರಮನಿ, ಫಾರೂಕ್‌ಸಾಬ ಖಾಜಿ, ಕೆ.ಭೀಮಣ್ಣ, ಪಟ್ಟಣ ಪಂಚಾಯಿತಿ ಅಧ್ಯಕ್ಷ ಶಾಮೀದಸಾಬ ಚೌದ್ರಿ, ಮಂಟೆಪ್ಪ ಎಲೆಕೂಡ್ಲಿಗಿ, ಉಮರ್‌ಸಾಹೇಬ್, ಸಿದ್ದೇಶ ಗುರಿಕಾರ, ನಿರುಪಾದೆಪ್ಪ ಗುಡಿಹಾಳ, ವಿಎಸ್‌ಎಸ್‌ಎನ್ ಅಧ್ಯಕ್ಷ ನಿಂಗಪ್ಪ ಬಿ, ಮಲ್ಲನಗೌಡ ಸುಂಕನೂರು, ಹನುಮೇಶ ಬಾಗೋಡಿ, ಬಾಲಪ್ಪ ಕುಂಟೋಜಿ, ಶೇಖರಗೌಡ ದೇವರಮನಿ, ಬಾಬುಗೌಡ ದೇವರಮನಿ, ಯಲ್ಲಪ್ಪ ಭೋವಿ ಇತರರಿದ್ದರು.