

ವಿಜಯವಾಣಿ ಸುದ್ದಿಜಾಲ ಧಾರವಾಡ
ಅರ್ಜೆಂಟೀನಾದ ರಾಜಧಾನಿ ಬ್ಯೂನಸ್ ಐರಿಸ್ನಲ್ಲಿ ಏರ್ಪಡಿಸಿರುವ ಅಂತರ್ ರಾಷ್ಟ್ರೀಯ ಶಿಕ್ಷಕರ ಸಮಾವೇಶದಲ್ಲಿ ಕರ್ನಾಟಕದಿಂದ ಅಖಿಲ ಭಾರತ ಶಿಕ್ಷಕರ ಫೆಡರೇಷನ್ ರಾಷ್ಟ್ರೀಯ ಕಾರ್ಯಾಧ್ಯಕ್ಷ ಬಸವರಾಜ ಗುರಿಕಾರ ಪಾಲ್ಗೊಳ್ಳಲಿದ್ದಾರೆ.
ಎಜ್ಯುಕೇಶನ್ ಇಂಟರ್ನ್ಯಾಷನಲ್ ವತಿಯಿಂದ 10 ನೇ ಅಂತರ್ ರಾಷ್ಟ್ರೀಯ ಶಿಕ್ಷಕರ ಸಮಾವೇಶವು ಜು. 27ರಿಂದ ಆ. 2ರವರೆಗೆ ಜರುಗಲಿದೆ. ಈ ಸಮಾವೇಶದಲ್ಲಿ 147 ದೇಶದ ಶಿಕ್ಷಕ ಪ್ರತಿನಿಧಿಗಳು ಭಾಗವಹಿಸಲಿದ್ದು, ಅಖಿಲ ಭಾರತ ಶಿಕ್ಷಕರ ಫೆಡರೇಷನ್ ವತಿಯಿಂದ ರಾಷ್ಟ್ರೀಯ ಕಾರ್ಯಾಧ್ಯಕ್ಷ ಬಸವರಾಜ್ ಗುರಿಕಾರ, ಮಹಾಪ್ರಧಾನ ಕಾರ್ಯದರ್ಶಿ ಕಮಲಕಾಂತ ತ್ರಿಪಾಠಿ, ಖಜಾಂಚಿ ಹರಿಗೋವಿಂದನ ಭಾಗವಹಿಸಲಿದ್ದಾರೆ.
ಈ ಸಮಾವೇಶದಲ್ಲಿ ಶಿಕ್ಷಕರ ಸೇವಾ ಭದ್ರತೆ, ಶಿಕ್ಷಕರ ವೇತನ ನೀತಿ, ಸೇವಾ ಸೌಲಭ್ಯಗಳು, ಕಲಿಕೆ ಹಾಗೂ ಕಲಿಸುವಿಕೆಯ ಅಂಶಗಳು ಗುಣಾತ್ಮಕ ಶಿಕ್ಷಣ ಹಾಗೂ ಇತರ ವಿಷಯಗಳ ಬಗ್ಗೆ ಚರ್ಚೆ ಹಾಗೂ ವಿವಿಧ ದೇಶದ ಶಿಕ್ಷಕ ಸಂಘಟನೆಯ ನಾಯಕರು ತಮ್ಮ ದೇಶದ ಶಿಕ್ಷಣ ನೀತಿ ಹಾಗೂ ಶಿಕ್ಷಕರ ಸಮಸ್ಯೆಗಳ ಬಗ್ಗೆ ಚರ್ಚೆ ನಡೆಸಲಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.