

ಬೆಂಗಳೂರು: ನಗರದ ಹೃದಯ ಭಾಗದಲ್ಲಿರುವ ಕೆಂಪೇಗೌಡ ರಸ್ತೆಯಲ್ಲಿರುವ ಗುಪ್ತಾ ಮಾರ್ಕೆಟ್ ಜಾಗವು ಪಾಲಿಕೆಯ ಸ್ವತ್ತಾಗಿದ್ದು, ನಕಲಿ ದಾಖಲೆ ಬಳಸಿ ಖಾಸಗಿಯವರಿಗೆ ಪರಭಾರೆ ಮಾಡಲಾಗಿದೆ. ಈ ಸ್ಚತ್ತಿನ ಜಾಗದಲ್ಲೀಗ ಬೃಹತ್ ಮಾಲ್ ನಿರ್ಮಾಣವಾಗುತ್ತಿದ್ದು, ಕಟ್ಟಡ ನಿರ್ಮಾಣ ಬೈಲಾ ಉಲ್ಲಂಸಿರುವುದರಿಂದ ಸ್ವಾಧೀನಾನುಭವ ಪತ್ರ (ಒಸಿ) ನೀಡಬಾರದು ಎಂದು ಬಿಜೆಪಿ ಮುಖಂಡ ಎನ್.ಆರ್.ರಮೇಶ್ ಪಾಲಿಕೆಗೆ ದೂರು ನೀಡಿದ್ದಾರೆ.
ಬೆಂಗಳೂರು ಸಿಟಿ ಮುನಿಸಿಪಾಲಿಟಿ ಇದ್ದಾಗಲೇ ನಂ: 27/66ರ 54,171 ಚದರ ಅಡಿ ವಿಸ್ತೀರ್ಣದ ಸ್ವತ್ತನ್ನು 1953-54ರಲ್ಲಿ ಬಿ.ಎಸ್. ಗುಪ್ತಾ ಅವರಿಗೆ 99 ವರ್ಷಕ್ಕೆ ಗುತ್ತಿಗೆ ನೀಡಲಾಗಿತ್ತು. ಆದರೆ, 2011ರಲ್ಲಿ ಖಾಸಗಿ ವ್ಯಕ್ತಿಗಳು ನಿಯಮ ಮೀರಿ ಸ್ವತ್ತು ಖರೀದಿಸಿ ಸ್ವಂತ ಆಸ್ತಿ ಎಂದು ಬಿಂಬಿಸಿ ಪಾಲಿಕೆಯಿಂದ ಕಾಗದಪತ್ರಗಳನ್ನು ಪಡೆದಿದ್ದಾರೆ. ಮೂಲ ದಾಖಲೆ ನಾಶಪಡಿಸಿರುವ ಕಾರಣ ಮಾಲೀಕತ್ವ ವಿವಾದಕ್ಕೆ ಹಾಲಿ ಪಾಲಿಕೆ ಮುಖ್ಯಸ್ಥರು ಕ್ರಮಕ್ಕೆ ಹಿಂದೇಟು ಹಾಕುತ್ತಿದ್ದಾರೆ ಎಂದು ಅವರು ಆರೋಪಿಸಿದ್ದಾರೆ.
2011ರಿಂದ ಸ್ವತ್ತಿನ ವಿವಾದ ಇದ್ದರೂ, ನಕಲಿ ದಾಖಲೆ ಆಧರಿಸಿ ಹಳೆಯ ಬಿಲ್ಡಿಂಗ್ ಕೆಡವಿ ಹೊಸ ಕಟ್ಟಡ ನಿರ್ಮಿಸಲು ಒಪ್ಪಿಗೆ ನೀಡಲಾಗಿದೆ. ಈಗ 5 ಸ್ಕ್ರೀನ್‌ಗಳ ಮಲ್ಟಿಪ್ಲೆಕ್ಸ್ ಒಳಗೊಂಡ ಬೃಹತ್ ಶಾಪಿಂಗ್ ಮಾಲ್ ನಿರ್ಮಿಸಲಾಗಿದೆ. ಸ್ವತ್ತಿಗೆ ಅನುಗುಣವಾಗಿ ಸೆಟ್ ಬ್ಯಾಕ್ ಬಿಡದೆ ಬಿಲ್ಡಿಂಗ್ ಕಟ್ಟಲಾಗಿದೆ. ಜತೆಗೆ ಪಾಲಿಕೆ ಆಚೆಯಿರುವ ಬಿದರಹಳ್ಳಿ ಹೋಬಳಿಯ ಹಿರಂಡಹಳ್ಳಿ ಗ್ರಾಮದಲ್ಲಿ ಪಡೆದಿದ್ದ ಟಿಡಿಆರ್‌ಅನ್ನು ಕೆಂಪೇಗೌಡ ರಸ್ತೆಗೆ ವರ್ಗಾಯಿಸಿ ಅಕ್ರಮವಾಗಿ ಸೌಲಭ್ಯ ಪಡೆಯಲಾಗಿದೆ. ಇದಕ್ಕೆ ಅನುಮತಿ ನೀಡಬಾರದಿದ್ದ ಪಾಲಿಕೆಯ ಅಧಿಕಾರಿಗಳು ವಾಮಮಾರ್ಗ ಅನುಸರಿಸಿ ಒಪ್ಪಿಗೆ ಕೊಟ್ಟಿರುವುದರಿಂದ ಬಿಬಿಎಂಪಿ ಬೊಕ್ಕಸಕ್ಕೆ ಕೋಟ್ಯಂತರ ರೂ. ನಷ್ಟವಾಗಿದೆ. ಇದಕ್ಕೆ ಕಾರಣರಾಗಿರುವ ನಗರ ಯೋಜನೆ ವಿಭಾಗದ ಅಧಿಕಾರಿಗಳು ಹಾಗೂ ಇತರರ ವಿರುದ್ಧ ಶಿಸ್ತುಕ್ರಮ ಕೈಗೊಳ್ಳಬೇಕು ಎಂದು ಎನ್.ಆರ್.ರಮೇಶ್ ಅವರು ಪಾಲಿಕೆಯ ಮುಖ್ಯ ಆಯುಕ್ತರಿಗೆ ಪತ್ರ ಬರೆದು ಒತ್ತಾಯಿಸಿದ್ದಾರೆ.