

ಹುಬ್ಬಳ್ಳಿ: ಜನಪ್ರಿಯ ವೈದ್ಯ, ಕಲಾವಿದ ಹಾಗೂ ಮಾಜಿ ಮೇಯರ್ ಡಾ. ಪಾಂಡುರಂಗ ಪಾಟೀಲ ಅವರಿಗೆ ಆರ್. ಗುಂಡೂರಾವ್ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ಕೀತಿರ್ಶೇಷ ಮಾಜಿ ಮುಖ್ಯಮಂತ್ರಿ ದಿ. ಆರ್. ಗುಂಡೂರಾವ್ ಅವರ 31ನೇ ಪುಣ್ಯಸ್ಮರಣೆ ನಿಮಿತ್ತ ಗುಂಡೂರಾವ್ ಅಭಿಮಾನಿ ಬಳಗವು ನಗರದಲ್ಲಿ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಅವರ ಆಪ್ತ ಡಾ. ಗೋವಿಂದ ಮಣ್ಣೂರ ಹಾಗೂ ಇತರರು ಪ್ರಶಸ್ತಿ ಫಲಕ ನೀಡಿ ಸನ್ಮಾನಿಸಿದರು.
ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ಡಾ. ಪಾಟೀಲ್ ಅವರು, ನಿಷ್ಠುರ ನಡೆಯ, ವಿಶಾಲ ಮನೋಭಾವದ ಆರ್. ಗುಂಡೂರಾವ್ ಮುಖ್ಯಮಂತ್ರಿಯಾಗಿ ನಡೆಸಿದ ಕಟ್ಟುನಿಟ್ಟಿನ ಆಡಳಿತ ಬೇರೆ ಯಾರಿಂದಲೂ ನಿರೀಕ್ಷಿಸಲೂ ಸಾಧ್ಯವಿಲ್ಲ. ಗಟ್ಟಿತನದ ಆಡಳಿತ ವೈಖರಿಗೆ ಅವರು ಹೆಸರಾಗಿದ್ದರು ಎಂದು ಸ್ಮರಿಸಿದರು.
ಅವರ ಹಾಗೆ ಚಾಕಚಕ್ಯತೆಯ ಆಡಳಿತ ನಡೆಸಲು ಯಾರಿಗೂ ಬರುವುದಿಲ್ಲ. ಅಂಥ ಮೇಧಾವಿ ವ್ಯಕ್ತಿತ್ವದ ಗುಂಡೂರಾವ್ ಸಾಧನೆಗಳನ್ನು ಯುವಜನರಿಗೆ ತಲುಪಿಸುವ ಕಾರ್ಯ ಆಗಬೇಕಿದೆ. ಈ ದಿಶೆಯಲ್ಲಿ ಡಾ. ಗೋವಿಂದ ಮಣ್ಣೂರ ಮತ್ತವರ ಮಿತ್ರರು ಪ್ರತಿ ವರ್ಷ ಅವರ ಹೆಸರಿನಲ್ಲಿ ಪ್ರಶಸ್ತಿ ನೀಡಿ, ಅವರ ಕಾರ್ಯಗಳನ್ನು ನೆನಪಿಸುವ ಕಾರ್ಯಕ್ರಮ ಮಾಡುತ್ತಿರುವುದು ಶ್ಲಾಘನೀಯ ಎಂದರು.
ಪತ್ರಕರ್ತ ಗಣಪತಿ ಗಂಗೊಳ್ಳಿ ಮಾತನಾಡಿದರು. ಅಧ್ಯಕ್ಷತೆ ವಹಿಸಿದ್ದ ಹಿರಿಯ ಕಾಂಗ್ರೆಸ್ ಧುರೀಣ ಆರ್.ವೆ. ಮಿರಜಕರ, ಗುಂಡೂರಾವ್ರ ಜತೆ ಕಳೆದ ಕ್ಷಣಗಳನ್ನು ಹಂಚಿಕೊಂಡರು. ಡಾ. ಗೋವಿಂದ ಮಣ್ಣೂರ ಪ್ರಾಸ್ತಾವಿಕವಾಗಿ ಮಾತನಾಡಿದರು.
ಪಾಲಿಕೆ ಮಾಜಿ ಸದಸ್ಯ ಚಂದ್ರಶೇಖರ ಅಳಗುಂಡಗಿ, ಮಹಿಳಾ ಕಾಂಗ್ರೆಸ್ ನಾಯಕಿ ಜಿ. ದೇವಕಿ, ಬ್ಲಾಕ್ ಕಾಂಗ್ರೆಸ್ ಅಧ್ಯ ಪ್ರಸನ್ನಕುಮಾರ ಮಿರಜಕರ, ಸಂಜಯ ಅಳಗುಂಡಗಿ, ಯೂನುಸ್ ಮುಂಡಾಸರ ಮೊದಲಾದವರು ಉಪಸ್ಥಿತರಿದ್ದರು.
ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಗೌತಮ ಹರಿವಾಣ ಸ್ವಾಗತಿಸಿದರು. ವಿಶ್ವನಾಥ ಕುಲಕರ್ಣಿ ನಿರೂಪಿಸಿದರು.