ಗುಂಡ್ಲುಪೇಟೆ ತಾಲೂಕಿಗಿಲ್ಲ ಕಾಯಂ ಇಒ

01-GPT-1-
Published on

ಗುಂಡ್ಲುಪೇಟೆ: ತಾಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ವರ್ಗಾವಣೆಯಾಗಿ ತಿಂಗಳಾದರೂ ಬೇರೊಬ್ಬ ಕಾಯಂ ಅಧಿಕಾರಿಯನ್ನು ನಿಯೋಜನೆ ಮಾಡದೆ ಸ್ಥಳೀಯ ಅಧಿಕಾರಿಗಳಿಗೂ ಚಾರ್ಜ್ ನೀಡದ ಪರಿಣಾಮ ಗ್ರಾಮಾಡಳಿತ ಸಂಪೂರ್ಣ ಹದಗೆಟ್ಟುಹೋಗಿದೆ.

ತಾಲೂಕಿನಲ್ಲಿರುವ ಒಟ್ಟು 35 ಗ್ರಾಮ ಪಂಚಾಯಿತಿಗಳ ಪೈಕಿ 11 ರಲ್ಲಿ ನಾನಾ ಕಾರಣಗಳಿಂದ ಅಭಿವೃದ್ಧಿ ಅಧಿಕಾರಿ ಹುದ್ದೆಗಳು ಖಾಲಿಯಾಗಿದ್ದರಿಂದ ಅಕ್ಕಪಕ್ಕದ ಪಂಚಾಯಿತಿಗಳ ಅಧಿಕಾರಿಗಳಿಗೇ ಹೆಚ್ಚುವರಿ ಚಾರ್ಜ್ ನೀಡಲಾಗಿದೆ. ಪಿಡಿಒಗಳಿಗೆ ಎರಡು ಪಂಚಾಯಿತಿಗಳ ಹೊಣೆ ನೀಡಿದ್ದರಿಂದ ಆ ಎರಡೂ ಪಂಚಾಯಿತಿಗಳಲ್ಲಿಯೂ ಸರಿಯಾಗಿ ಕೆಲಸ ಕಾರ್ಯಗಳಾಗುತ್ತಿಲ್ಲ ಎಂಬ ಆರೋಪ ಕೇಳಿಬರುತ್ತಿದೆ. ಇದೇ ಸಂದರ್ಭದಲ್ಲಿ ಗ್ರಾಮ ಪಂಚಾಯಿತಿಗಳ ಮೇಲುಸ್ತುವಾರಿ ವಹಿಸಬೇಕಾದ ತಾಲೂಕು ಪಂಚಾಯಿತಿಗೆ ಕಾಯಂ ಕಾರ್ಯನಿರ್ವಹಣಾಧಿಕಾರಿ ನಿಯೋಜನೆ ಮಾಡದ ಪರಿಣಾಮ ಗ್ರಾಮ ಪಂಚಾಯಿತಿಗಳ ಆಡಳಿತ ಸಂಪೂರ್ಣ ಹದಗೆಟ್ಟಿದೆ ಎಂದು ಸಾರ್ವಜನಿಕರು ತೀವ್ರ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

ತಾಲೂಕು ಪಂಚಾಯಿತಿಯ ಕಾರ್ಯನಿರ್ವಹಣಾಧಿಕಾರಿಯಾಗಿದ್ದ ರಾಮಲಿಂಗಯ್ಯ ಕಳೆದ ತಿಂಗಳು ಬೇರೆಡೆಗೆ ವರ್ಗಾವಣೆಯಾದರು. ಖಾಲಿಯಾದ ಸ್ಥಳಕ್ಕೆ ತಿಂಗಳಾದರೂ ಸರ್ಕಾರ ಮತ್ತೊಬ್ಬ ಅಧಿಕಾರಿಯನ್ನು ನಿಯೋಜನೆ ಮಾಡಿಲ್ಲ. ಅಲ್ಲದೆ ತತ್ಸಮಾನ ಹುದ್ದೆಯ ಸ್ಥಳೀಯ ಅಧಿಕಾರಿಗಳಿಗೂ ಹೊಣೆ ನೀಡದೆ ಚಾಮರಾಜನಗರ ತಾಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿಗೆ ಚಾರ್ಜ್ ನೀಡಿದೆ. ಆದರೆ ಅವರು ಒಮ್ಮೆಯೂ ಇತ್ತ ತಲೆಹಾಕಿಲ್ಲ. ಇದರಿಂದ ಗ್ರಾಮಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳ ಮೇಲ್ವಿಚಾರಣೆ ಹಾಗೂ ನಿಯಂತ್ರಣ ಸಂಪೂರ್ಣ ಇಲ್ಲವಾಗಿದೆ ಎಂದು ಅಧಿಕಾರಿಗಳೇ ಒಪ್ಪಿಕೊಳ್ಳುತ್ತಿದ್ದಾರೆ.

ಪಿಡಿಒಗಳು ರಜೆ ಬೇಕಾದರೆ ಕಾರ್ಯನಿರ್ವಹಣಾಧಿಕಾರಿಗಳಿಗೆ ಅರ್ಜಿ ಸಲ್ಲಿಸಿ ಮಂಜೂರು ಮಾಡಿಸಿಕೊಳ್ಳಬೇಕಾಗಿದೆ. ಆದರೆ ತಾಲೂಕು ಪಂಚಾಯಿತಿಗೆ ಸದ್ಯ ಕಾಯಂ ಅಧಿಕಾರಿ ಇಲ್ಲದ ಕಾರಣ ಟಪಾಲಿನಲ್ಲಿ ಅರ್ಜಿ ಇಟ್ಟು ತಮಗಿಷ್ಟ ಬಂದಂತೆ ನಡೆದುಕೊಳ್ಳುತ್ತಿದ್ದು, ಇವರನ್ನು ಹೇಳುವವರು, ಕೇಳುವವರೂ ಇಲ್ಲದಂತಾಗಿದೆ. ಇದರಿಂದ ನರೇಗಾ ಯೋಜನೆಯಲ್ಲಿ ಕೆಲಸ ಮಾಡಿದ ಕಾರ್ಮಿಕರಿಗೆ ಸಕಾಲಕ್ಕೆ ಕೂಲಿ, ನಿರ್ಮಾಣ ಕಾಮಗಾರಿ ಕೈಗೊಂಡ ಗುತ್ತಿಗೆದಾರರಿಗೆ ಮೆಟೀರಿಯಲ್ ಬಿಲ್, ಪಂಚಾಯಿತಿ ಸಿಬ್ಬಂದಿ ವೇತನ ಎಲ್ಲವೂ ಅಸ್ತವ್ಯಸ್ಥವಾಗಿವೆ. ಅಧಿಕಾರಿಯ ಸಹಿ ಬೇಕಾದರೆ ಸಂಬಂಧಪಟ್ಟ ಕೇಸ್ ವರ್ಕರ್‌ಗಳು ತಮ್ಮ ವಿಭಾಗದ ಎಲ್ಲ ಕಡತಗಳನ್ನೂ ಚಾಮರಾಜನಗರಕ್ಕೆ ಕೊಂಡೊಯ್ದು ಪ್ರಭಾರ ಅಧಿಕಾರಿಯಿಂದ ಸಹಿ ಹಾಕಿಸಿ ತರುವಂತಾಗಿದೆ ಎಂದು ಹೆಸರು ಬಹಿರಂಗಪಡಿಸಲು ಇಚ್ಛಿಸದ ಕಚೇರಿಯ ಸಿಬ್ಬಂದಿ ಅಸಹಾಯಕತೆ ವ್ಯಕ್ತಪಡಿಸಿದ್ದಾರೆ.
ಕಾಮಗಾರಿ ಪೂರ್ಣಗೊಂಡರೂ ಹಣ ಬಿಡುಗಡೆ ಮಾಡದ ಪರಿಣಾಮ ನರೇಗಾ ಯೋಜನೆಯಲ್ಲಿ ಕೆಲಸ ಮಾಡಿದ ಕಾರ್ಮಿಕರಿಗೆ ಸಕಾಲದಲ್ಲಿ ಕೂಲಿ ಹಣ ಕೈಸೇರದಂತಾಗಿದೆ. ಹಲವು ಗ್ರಾಮಗಳಲ್ಲಿ ಸ್ವಚ್ಛತೆ, ಬೀದಿದೀಪ ಅಳವಡಿಕೆ, ಕುಡಿಯುವ ನೀರಿನ ಪೂರೈಕೆಗೆ ತೊಂದರೆಯಾಗುತ್ತಿದೆ. ಮಳೆಗಾಲದಲ್ಲಿ ರೋಗರುಜಿನಗಳು ವ್ಯಾಪಿಸುವ ಆತಂಕಕ್ಕೆ ಕಾರಣವಾಗುತ್ತಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net