ಬತ್ತಿಹೋಗಿರುವ ಗುಂಡ್ಲುನದಿಗೆ ಮರುಜೀವ ನೀಡಲು ಸಿದ್ಧತೆ; ಶಾಸಕ ನಿರಂಜನಕುಮಾರ್ ನೇತೃತ್ವದಲ್ಲಿ ಶೀಘ್ರ ಸಭೆ..

Gundlu pete
ಗುಂಡ್ಲುಪೇಟೆ ತಾಲೂಕಿನ ವಡೆಯನಪುರ ಕೆರೆಗೆ ನೀರು ತುಂಬುತ್ತಿರುವುದನ್ನು ಶಾಸಕ ಸಿ.ಎಸ್. ನಿರಂಜನ ಕುಮಾರ್ ವೀಕ್ಷಿಸಿದರು.
Published on

| ಕೆ.ಎನ್.ಮಹದೇವಸ್ವಾಮಿ ಗುಂಡ್ಲುಪೇಟೆ

ಗುಂಡ್ಲುಪೇಟೆಗೆ ಹೆಸರು ತಂದುಕೊಟ್ಟ, ಸುಮಾರು 40 ವರ್ಷಗಳ ಹಿಂದೆಯೇ ಬತ್ತಿಹೋಗಿರುವ ಗುಂಡ್ಲುನದಿ ಉಳಿಸಲು ಕನ್ನಡದ ನಂ.1 ದಿನಪತ್ರಿಕೆ ವಿಜಯವಾಣಿ ನಡೆಸುತ್ತಿರುವ ‘ಗುಂಡ್ಲುನದಿ ಉಳಿಸೋಣ’ ಅಭಿಯಾನ ಪ್ರಮುಖ ಘಟ್ಟ ತಲುಪಿದೆ. ದೇಶದಲ್ಲಿ ಅಂತರ್ಜಲವನ್ನು ಅತಿಹೆಚ್ಚು ಬಳಸಿದ 176 ತಾಲೂಕುಗಳಲ್ಲಿ ಗುಂಡ್ಲುಪೇಟೆಯೂ ಸೇರಿದ್ದು, ಭವಿಷ್ಯದಲ್ಲಿ ಎದುರಾಗಬಹುದಾದ ನೀರಿನ ಹಾಹಾಕಾರ ತಪ್ಪಿಸಲು ಒಂದು ಕಾಲದಲ್ಲಿ ವೈಭವದಿಂದ ಹರಿದಿದ್ದ ಜೀವನದಿಗೆ ಮರುಜೀವ ನೀಡುವ ಉದ್ದೇಶದಿಂದ ಅಭಿಯಾನ ನಡೆಸಲಾಗುತ್ತಿದೆ. ಪರಿಣಾಮವಾಗಿ ಶೀಘ್ರದಲ್ಲಿಯೇ ಶಾಸಕ ಸಿ.ಎಸ್. ನಿರಂಜನಕುಮಾರ್ ನೇತೃತ್ವದಲ್ಲಿ ಅರಣ್ಯ ಇಲಾಖೆ, ಕಂದಾಯ, ನೀರಾವರಿ ಸೇರಿ ಇತರ ಇಲಾಖೆಗಳ ಅಧಿಕಾರಿಗಳ ಸಭೆ ನಡೆಯಲಿದೆ. ನದಿ ಪುನಶ್ಚೇತನಕ್ಕೆ ಅನುದಾನ ದೊರಕುವ ನಿರೀಕ್ಷೆಯಿದೆ. ಗುಂಡ್ಲುಪೇಟೆಯ ಹಿಮವದ್ ಗೋಪಾಲಸ್ವಾಮಿ ಬೆಟ್ಟದಲ್ಲಿ ಬಿದ್ದ ಮಳೆನೀರು ಹಳ್ಳಕೊಳ್ಳಗಳಲ್ಲಿ ಹರಿದು ಕೆರೆಕಟ್ಟೆಗಳನ್ನು ತುಂಬಿ ಗುಂಡ್ಲು ನದಿಯಾಗಿ ಹರಿದು ನಂಜನಗೂಡಿನ ಕಬಿನಿಯನ್ನು ಸೇರುತ್ತಿತ್ತು. ಈ ನೀರಿನ ಸದ್ಬಳಕೆಗೆ 1965ರಲ್ಲಿ ಬಾಗೂರು ಸಮೀಪ ದೊಡ್ಡ ಒಡ್ಡು, 1984ರಲ್ಲಿ ನಲ್ಲೂರು ಅಮಾನಿಕೆರೆ ಸಮೀಪ ಜಲಾಶಯ ನಿರ್ವಿುಸಲಾಗಿತ್ತು. ಸುತ್ತಮುತ್ತಲಿನ ಸಾವಿರಾರು ಎಕರೆ ಭೂಮಿಗೆ ನೀರುಣಿಸುತ್ತಿದ್ದ ಪರಿಣಾಮ ನದಿಯ ತೀರಗಳಲ್ಲಿ ತೆಂಗುಕಂಗಿನಿಂದ ಕಂಗೊಳಿಸುತ್ತಿದ್ದ ನದಿ ನಾನಾ ಕಾರಣಗಳಿಂದ ಬತ್ತಿಹೋಗಿದೆ.

ಅರಣ್ಯದೊಳಗೆ ನದಿ ಜೀವಂತ: ‘ಗುಂಡ್ಲು ನದಿ’ ಅರಣ್ಯದೊಳಗೆ ಹರಿಯುತ್ತಾ, ಹಾಲ್ನೊರೆಯಂತೆ ಕಂಗೊಳಿಸುತ್ತ ಜೀವಿಸುತ್ತಿದೆ. ಹೊರಗೆ ಮಾತ್ರ ಕಾಣೆಯಾದ ಪಟ್ಟಿಗೆ ಸೇರಿಕೊಂಡಿದೆ. ಬಂಡೀಪುರ ಹುಲಿ ಸಂರಕ್ಷಿತಾರಣ್ಯ ಪ್ರದೇಶದೊಳಗೆ ನಡೆಸಿದ ರಿಯಾಲಿಟಿ ಚೆಕ್​ನಲ್ಲಿ ಜೀವಜಲದ ದರ್ಶನವಾಯಿತು.

ನದಿ ಪುನಶ್ಚೇತನಕ್ಕೆ ತಾವು ಬದ್ದರಾಗಿದ್ದು ಸದ್ಯದಲ್ಲಿಯೇ ಅರಣ್ಯ, ಕಂದಾಯ ನೀರಾವರಿ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳ ಸಭೆ ನಡೆಸಿ ಸಮಾಲೋಚನೆ ನಡೆಸಲಾಗುವುದು. ಸರ್ವೇ ನಡೆಸಿ ಜಲಮಾರ್ಗಗಳಲ್ಲಿ ಉಂಟಾಗಿರುವ ತಡೆಗಳನ್ನು ನಿವಾರಿಸುವ ಜತೆಗೆ ನೀರಾವರಿ ತಜ್ಞರ ಜತೆ ರ್ಚಚಿಸಿ ನದಿ ಪುನಶ್ಚೇತನಕ್ಕೆ ಯೋಜನೆ ರೂಪಿಸಲಾಗುವುದು. ಇದಕ್ಕೆ ಅಗತ್ಯವಾದ ಹೆಚ್ಚಿನ ಅನುದಾನವನ್ನು ಸರ್ಕಾರದಿಂದ ಬಿಡುಗಡೆ ಮಾಡಿಸಿ ಕಾರ್ಯಾರಂಭ ಮಾಡಲಾಗುವುದು. | ಸಿ.ಎಸ್. ನಿರಂಜನಕುಮಾರ್ ಶಾಸಕರು

ವಿಜಯವಾಣಿ ಅಭಿಯಾನ

ವಿಜಯವಾಣಿ ಪತ್ರಿಕೆಯಿಂದ ಗುಂಡ್ಲುನದಿ ಉಳಿಸೋಣ ಅಭಿಯಾನ ನಡೆಸಲಾಗುತ್ತಿದ್ದು, ಪರಿಸರಪ್ರೇಮಿಗಳು, ರೈತರು, ಜನಪ್ರತಿನಿಧಿಗಳು, ವಕೀಲರು, ಅಧಿಕಾರಿಗಳು, ಸಾಹಿತಿಗಳು, ಸ್ವಾಮೀಜಿಗಳು, ಆಧ್ಯಾತ್ಮಿಕ ಚಿಂತಕರು ಹಾಗೂ ಅಭಿಯಾನಕ್ಕೆ ಪೂರಕವಾಗಿ ಕೆಲಸ ಮಾಡುತ್ತಿರುವ ಎಲ್ಲರನ್ನೂ ಒಗ್ಗೂಡಿಸಿ ಮುನ್ನಡೆಯಲಾಗುತ್ತಿದೆ. ಜತೆಗೆ ನದಿಯ ಇತಿಹಾಸ, ಮಹತ್ವ, ಜೀವನದಿ ಬತ್ತಿಹೋಗಲು ಕಾರಣಗಳು, ಇದರಿಂದ ನಿರುಪಯುಕ್ತವಾದ ಜಲಾಶಯ, ನದಿಯ ಪುನಶ್ಚೇತನಕ್ಕೆ ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ಅಧ್ಯಯನ ನಡೆಸಲಾಗಿದೆ. ನದಿ ಪಾತ್ರದಲ್ಲಿ ಬೆಳೆದಿದ್ದ ಗಿಡಗಂಟಿಗಳನ್ನು ತೆರವುಗೊಳಿಸಲು ಕ್ರಮಕೈಗೊಳ್ಳಲಾಗಿದೆ. ಮುಂದಿನ ದಿನಗಳಲ್ಲಿ ಅಭಿಯಾನದ ಸ್ವರೂಪ ಜನಾಂದೋಲನವಾಗಿ ಬದಲಾಗಿ ಗುಂಡ್ಲುನದಿ ಉಳಿವಿನಲ್ಲಿ ಪ್ರಮುಖ ಪಾತ್ರ ವಹಿಸಲಿದೆ.

ಅಂತರ್ಜಲ ಕುಸಿತ: ಯಾವುದೇ ಜಲಮೂಲಗಳಿಲ್ಲದೆ ಮಳೆಯಾಶ್ರಯದಲ್ಲಿರುವ ತಾಲೂಕಿನಲ್ಲಿ ಗುಂಡ್ಲುನದಿ ಕಣ್ಮರೆಯಾಗಿ ಅಂತರ್ಜಲ ಮಟ್ಟ ಇಳಿಕೆಯಾಗುತ್ತಿದೆ. ಕಾರ್ವಿುಕರು ನೆರೆಯ ಕೇರಳ, ತಮಿಳುನಾಡಿಗೆ ವಲಸೆ ಹೋಗುತ್ತಿದ್ದಾರೆ, ಯುವಕರು ಉದ್ಯೋಗ ಅರಸಿ ಪಟ್ಟಣಕ್ಕೆ ತೆರಳುತ್ತಿದ್ದಾರೆ. ಜನಜಾನುವಾರುಗಳಿಗೆ ಅಗತ್ಯವಾದ ನೀರು ದೊರಕದೆ ಉಪಕಸುಬಾದ ಹೈನುಗಾರಿಕೆಯಲ್ಲೂ ತೊಡಗಲಾಗುತ್ತಿಲ್ಲ. ಅಂತರ್ಜಲ ಅತಿ ಬಳಕೆಯ ಪರಿಣಾಮ ಹೊಸದಾಗಿ ಕೊಳವೆಬಾವಿ ಕೊರೆಸಲೂ ಅನುಮತಿ ಪಡೆಯಬೇಕಾಗಿದೆ. ಆನುಮತಿ ಸಿಕ್ಕರೂ ಸಾವಿರಾರು ಅಡಿ ಕೊರೆದರೂ ನೀರು ದೊರಕುತ್ತಿಲ್ಲ. ಇಂಥಾ ಪರಿಸ್ಥಿತಿಯಲ್ಲಿ ಗುಂಡ್ಲುನದಿಯನ್ನು ಪುನಶ್ಚೇತನಗೊಳಿಸಲೇ ಬೇಕಾದ ಅನಿವಾರ್ಯತೆ ಎದುರಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net