

ಗುಂಡ್ಲುಪೇಟೆ: ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ವತಿಯಿಂದ ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದಲ್ಲಿ ಎರಡು ಕೆರೆಗಳ ಪುನಶ್ಚೇತನ ಕಾರ್ಯ ಕೈಗೊಳ್ಳುವ ಮೂಲಕ ಬೇಸಿಗೆಯಲ್ಲಿ ವನ್ಯಜೀವಿಗಳಿಗೆ ನೀರಿನ ಕೊರತೆ ನೀಗಿಸಲು ಮುಂದಾಗಿದೆ.
ಮಳೆಯ ಕೊರತೆ ಹಾಗೂ ಬಿರುಬಿಸಿಲಿನಿಂದ ಬಂಡೀಪುರದಲ್ಲಿ ನೀರಿನ ಸಂಗ್ರಹ ಕಡಿಮೆಯಾಗಿದ್ದರಿಂದ ವನ್ಯಜೀವಿಗಳು ಪರಿತಾಪ ಪಡುತ್ತಿದ್ದವು. ಕೆಸರು ನೀರಿನಲ್ಲಿ ದಾಹ ತಣಿಸಿಕೊಳ್ಳುತ್ತಿದ್ದ ವನ್ಯಜೀವಿಗಳ ಪರಿಸ್ಥಿತಿ ಮನಕಲುಕುವಂತಾಗಿತ್ತು. ಈ ಬಾರಿ ಭೀಕರ ಬರಗಾಲದಿಂದ ಬಂಡೀಪುರದ ಕೆರೆಗಳಲ್ಲಿ ನೀರಿಲ್ಲದೆ ವನ್ಯಜೀವಿಗಳು ಸಂಕಷ್ಟ ಎದುರಿಸುತ್ತಿದ್ದ ಹಿನ್ನೆಲೆಯಲ್ಲಿ ಗ್ರಾಮಾಭಿವೃದ್ದಿ ಯೋಜನೆಯು 18 ಲಕ್ಷ ರೂ. ಅನುದಾನದಲ್ಲಿ 4.5 ಎಕರೆ ವಿಸ್ತೀರ್ಣದ ಬಂಡಿಪುರ ಕೆರೆ, 6 ಎಕರೆ ವಿಸ್ತೀರ್ಣದ ತಾವರೆಕಟ್ಟೆ ಎರಡು ಕೆರೆಗಳನ್ನು ಆಯ್ಕೆ ಮಾಡಿಕೊಂಡು ಪುನಶ್ಚೇತನ ಕಾಮಗಾರಿ ಕೈಗೊಂಡಿದೆ.
ಹಿಟಾಚಿ ಯಂತ್ರಗಳ ಮೂಲಕ ಕೆರೆಯ ಆವರಣದಲ್ಲಿ ಬೆಳೆದಿದ್ದ ಗಿಡಗಂಟಿಗಳನ್ನು ತೆರವು ಮಾಡಿ ಬಹಳ ವರ್ಷಗಳಿಂದ ಸಂಗ್ರಹವಾಗಿದ್ದ ಹೂಳನ್ನು ತೆಗೆದು ಏರಿಯನ್ನು ಎತ್ತರಿಸಲಾಗುತ್ತಿದೆ. ಕಾಲುವೆಗಳಲ್ಲಿ ಬೆಳೆದಿರುವ ಗಿಡಗಂಟಿ ತೆರವು ಮಾಡಿ ಮಳೆನೀರು ಸರಾಗವಾಗಿ ಕೆರೆಗೆ ಸೇರುವಂತೆ ವ್ಯವಸ್ಥೆ ಮಾಡಲಾಗಿದೆ. ಇದರಿಂದ ಮಳೆಗಾಲದಲ್ಲಿ ಕೆರೆಗಳಲ್ಲಿ ಹೆಚ್ಚಿನ ಪ್ರಮಾಣದ ನೀರು ಸಂಗ್ರಹವಾಗುವುದರಿಂದ ಬೇಸಿಗೆ ಸಂದರ್ಭದಲ್ಲಿ ಕುಡಿಯುವ ನೀರಿನ ಕೊರತೆ ನೀಗಲಿದೆ. ಅಲ್ಲದೆ ವನ್ಯಜೀವಿಗಳು ಕೆರೆ ಅಂಗಳಕ್ಕೆ ಇಳಿಯಲು ಅನುಕೂಲವಾಗುವಂತೆ ವೈಜ್ಞಾನಿಕ ಇಳಿಜಾರುಗಳನ್ನು ನಿರ್ಮಿಸಲಾಗುತ್ತಿದೆ.
ಸಾಮಾಜಿಕ ಮತ್ತು ಶೈಕ್ಷಣಿಕ ಜಾಗೃತಿ, ಪರಿಸರ ಸಂರಕ್ಷಣೆ, ಮಧ್ಯವರ್ಜನ ಶಿಬಿರ ಮುಂತಾದ ಸಮಾಜಮುಖಿ ಕೆಲಸಗಳಲ್ಲಿ ತೊಡಗಿಸಿಕೊಂಡಿರುವ ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಕರ್ನಾಟಕ ರಾಜ್ಯದಾದ್ಯಂತ ಅಯ್ದ ಕೆರೆಗಳಿಗೆ ಮರುಜೀವ ನೀಡುವ ಸಲುವಾಗಿ ನಮ್ಮೂರು ನಮ್ಮ ಕೆರೆ ಎಂಬ ಯೋಜನೆಯನ್ನು ಪ್ರಾರಂಭಿಸಿದೆ. ರಾಜ್ಯದಾದ್ಯಂತ 743 ಕೆರೆಗಳನ್ನು ಪುನಶ್ಚೇತನಗೊಳಿಸಿದ್ದು ಸುಮಾರು 57 ಕೋಟಿ ರೂ. ಅನುದಾನವನ್ನು ವಿನಿಯೋಗ ಮಾಡಿ ಅಭಿವೃದ್ಧಿಪಡಿಸಿದೆ. ಇದರಲ್ಲಿ ತಾಲೂಕಿನ ರಂಗೂಪುರ, ಹೊಂಗಹಳ್ಳಿ, ಕೆಬ್ಬೇಪುರ ಹಾಗೂ ಬಂಡೀಪುರ ಕೆರೆಗಳೂ ಸೇರಿವೆ.