

ಗುಂಡ್ಲುಪೇಟೆ: ತಾಲೂಕಿನ ಬಫರ್ ವಲಯದ ನಾನಾ ಭಾಗಗಳಲ್ಲಿ ಹುಲಿ ಚಿರತೆಗಳು ಸಂಚರಿಸುತ್ತಿರುವುದು ಅರಣ್ಯ ಇಲಾಖೆಗೆ ತಲೆನೋವು ತಂದಿದ್ದು, ಇವುಗಳ ಸೆರೆಗೆ ಬೋನು ಅಳವಡಿಸುತ್ತಿದ್ದಾರೆ.
ತಾಲೂಕಿನ ವಡೆಯನಪುರ, ಹೊಸೂರು ಮುಂತಾದ ಕಡೆಗಳಲ್ಲಿ ಚಿರತೆಗಳು ದಾಳಿ ನಡೆಸಿ ಸಾಕುಪ್ರಾಣಿಗಳನ್ನು ಕೊಂದುಹಾಕುತ್ತಿವೆ. ಆದರೆ ಕೆಲವು ದಿನಗಳ ಹಿಂದೆ ತಾಲೂಕಿನ ಪಡಗೂರು ಗ್ರಾಮದ ಸುತ್ತಮುತ್ತ ಸುಳಿದಾಡುತ್ತಿದ್ದ ಹುಲಿ ಮತ್ತೆ ಕಾಣಿಸಿಕೊಂಡಿರುವುದು ಗ್ರಾಮಸ್ಥರ ಆತಂಕಕ್ಕೆ ಕಾರಣವಾಗಿದ್ದು, ಕೂಡಲೇ ಹುಲಿ ಸೆರೆಹಿಡಿಯುವಂತೆ ಗ್ರಾಮಸ್ಥರು ಅರಣ್ಯ ಇಲಾಖೆಯನ್ನು ಒತ್ತಾಯಿಸಿದ್ದಾರೆ.
ಕಳೆದ ಆರೇಳು ತಿಂಗಳಿನಿಂದ ಹುಲಿಯೊಂದು ಕೆಲಸೂರು, ಮಲ್ಲಮ್ಮನಹುಂಡಿ ಹಾಗೂ ಬೆರಟಹಳ್ಳಿ ಗ್ರಾಮಗಳ ಸುತ್ತಮುತ್ತಲೇ ಸುಳಿದಾಡುತ್ತಿದ್ದು, ಸುತ್ತಮುತ್ತಲಿನ ಗ್ರಾಮಸ್ಥರಲ್ಲಿ ಆತಂಕ ಮೂಡಿಸಿದೆ. ಕೆಲವು ದಿನಗಳ ಹಿಂದೆ ಪಡಗೂರು ಗ್ರಾಮದ ಜಮೀನಿನಲ್ಲಿ ಹುಲಿ ರೈತರ ಕಣ್ಣೆದುರೇ ಜಿಂಕೆಯ ಮೇಲೆರಗಿ ಕೊಂದುಹಾಕಿತ್ತು. ಇದರ ಸೆರೆಗೆ ಅರಣ್ಯ ಇಲಾಖೆ ಕೂಂಬಿಂಗ್ ನಡೆಸಿ ಬೋನು ಇರಿಸಿದ್ದರೂ ಚಾಲಾಕಿ ಹುಲಿ ಅತ್ತ ಸುಳಿಯುತ್ತಿಲ್ಲ.
ಇದರಿಂದ ಗ್ರಾಮಗಳ ರೈತರು ತಮ್ಮ ಜಾನುವಾರುಗಳೊಂದಿಗೆ ಜಮೀನುಗಳಿಗೆ ಹೋಗಲು ಭಯಪಡುತ್ತಿರುವ ಹಿನ್ನೆಲೆಯಲ್ಲಿ ಬಫರ್ ವಲಯದ ಅರಣ್ಯ ಸಿಬ್ಬಂದಿ ಹಾಗೂ ಎಸ್‌ಟಿಪಿಎಫ್ ಸಿಬ್ಬಂದಿ ಹುಲಿ ಹೆಜ್ಜೆಯ ಜಾಡಿನಲ್ಲಿ ಕೂಂಬಿಂಗ್ ನಡೆಸಿದರೂ ಪತ್ತೆಯಾಗದ ಹಿನ್ನೆಲೆಯಲ್ಲಿ ಹುಲಿಯ ಚಲನವಲನ ಪತ್ತೆಗೆ ಕ್ಯಾಮರಾ ಅಳವಡಿಸಿ ಸೆರೆಗೆ ಬೋನು ಇರಿಸಿದ್ದರೂ ಹುಲಿ ಚಿತ್ರ ಸೆರೆಯಾಗಿಲ್ಲ. ಕೂಂಬಿಂಗ್ ನಡೆಸಿದ ನಂತರ ಕೆಲವು ದಿನ ಕಣ್ಮರೆಯಾಗಿದ್ದ ಹುಲಿ ಎಂದಿನಂತೆ ಅದೇ ಮಾರ್ಗಗಳಲ್ಲಿ ಸಂಚರಿಸುತ್ತಿದೆ, ಹಲವಾರು ಜಮೀನುಗಳಲ್ಲಿ ಹುಲಿ ಸಂಚರಿಸಿದ ಹೆಜ್ಜೆ ಗುರುತುಗಳು ಸ್ಪಷ್ಟವಾಗಿ ಮೂಡಿರುವುದರಿಂದ ರೈತರು ಹಾಗೂ ಕಾರ್ಮಿಕರು ಜಮೀನುಗಳಿಗೆ ಹೋಗಲು ಭಯಪಡುತ್ತಿದ್ದಾರೆ. ಹುಲಿಯನ್ನು ಸೆರೆಹಿಡಿಯುವಂತೆ ಅರಣ್ಯ ಇಲಾಖೆಯ ಮೇಲೆ ಒತ್ತಡ ಹೇರುತ್ತಿದ್ದಾರೆ. ಕೂಡಲೇ ಬೋನು ಅಳವಡಿಸಲಾಗುವುದು ಎಂದು ಅರಣ್ಯಾಧಿಕಾರಿಗಳು ತಿಳಿಸಿದ್ದಾರೆ.